371(ಜೆ) ಕಲಂಗೆ ವಿರೋಧ ಖಂಡಿಸಿ 29ಕ್ಕೆ ಪ್ರತಿಭಟನೆ

| Published : Jun 23 2024, 02:06 AM IST

ಸಾರಾಂಶ

ಬೀದರ್‌ ನಗರದ ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ಶನಿವಾರ 371(ಜೆ) ಕಲಂ ವಿರೋಧ ಖಂಡಿಸಿ ಮತ್ತು ಹೋರಾಟದ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ, ಬೀದರ್‌

ಕಲ್ಯಾಣ ಕರ್ನಾಟಕ ಜನ ವಿರೋಧಿ, 371(ಜೆ) ಕಲಂ ವಿರೋಧಿ ಮತ್ತು ಸಂವಿಧಾನ ವಿರೋಧಿ ಶಕ್ತಿಗಳಿಗೆ ಖಂಡಿಸಿ ಜೂ. 29ರಂದು ಬೀದರ್‌ನಲ್ಲಿ ಬೃಹತ್‌ ಪ್ರತಿಭಟನೆ ಮಾಡಲು ಶನಿವಾರ ನಡೆದ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ನಗರದ ಬಿ.ವಿ ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ನಾಡೋಜ ಬಸವಲಿಂಗ ಪಟ್ಟದ್ದೇವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜೂ. 29ರಂದು ಬೆಳಗ್ಗೆ 10ಕ್ಕೆ ನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು.

ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಮಾತನಾಡಿ, ಇದೊಂದು ಭಾವನಾತ್ಮಕ ಹೋರಾಟ. ನಮ್ಮ ಭಾಗದ ಮಕ್ಕಳಿಗೆ 371 (ಜೆ) ಅನುಕೂಲವಾಗುತ್ತಿದ್ದು ಇನ್ನೂ ಅನೇಕ ತಾಂತ್ರಿಕ ಸಮಸ್ಯೆಗಳಿವೆ, ಅದು ಅಕ್ಷರಶಃ ಅನುಷ್ಠಾನವಾಗಬೇಕಾಗಿದೆ. ಆದರೆ ಬೆಂಗಳೂರಿನಲ್ಲಿ ಇತ್ತೀಚೆಗೆ ಹೊಸ ಸಂಘಟೆನೆಯೊಂದನ್ನು ಹುಟ್ಟುಹಾಕಿ ನಮ್ಮ ಭಾವನೆಗೆ ಕೆಡುಕು ಮಾಡುತ್ತಿರುವ ಪ್ರವೃತ್ತಿ ಖಂಡಿಸಬೇಕಾಗಿದೆ. ಈ ದಿಸೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ಮಾಡಲಾಗುತ್ತಿದೆ ಎಂದು ನುಡಿದರು.

ಪ್ರಗತಿಪರ ಚಿಂತಕರಾದ ಆರ್‌.ಕೆ. ಹುಡಗಿ ಮಾತನಾಡಿ, ಈ ಹೋರಾಟ ನಾವೆಲ್ಲರೂ ಸವಾಲಾಗಿ ಸ್ವೀಕರಿಸಬೇಕಾಗಿದೆ. ನಮ್ಮ ಹಕ್ಕಿಗಾಗಿ ಈ ಹೋರಾಟ ನ್ಯಾಯ ಸಮ್ಮತವಾಗಿದೆ. ಇಲ್ಲಿ ಜಾತಿ, ಮತ ಪಂಥ ಭೇದವಿಲ್ಲದೆ ಎಲ್ಲ ಪ್ರಗತಿಪರ ವಿಚಾರಧಾರೆ ಹಾಗೂ ಶಿಕ್ಷಣ ಸಂಸ್ಥೆಗಳು ವಿವಿಧ ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಒಟ್ಟಾಗಿ ಸೇರಿ ಪ್ರತಿಭಟಿಸೋಣ ಎಂದು ಮನವಿ ಮಾಡಿದರು.

ಹೋರಾಟ ಸಮಿತಿ ಗೌರವಾಧ್ಯಕ್ಷ ಬಸವರಾಜ ದೇಶಮುಖ ಮಾತನಾಡಿ, ನಮ್ಮಲ್ಲಿ ಹೋರಾಟದ ಮನೋಭಾವನೆ ಇಲ್ಲ. ಮಕ್ಕಳ ಭವಿಷ್ಯತ್ತಿನ ಹಿತದೃಷ್ಟಿಯಿಂದ ಹೋರಾಟ ಮಾಡಲೇಬೇಕಾಗಿದೆ. ಈ ಹೋರಾಟ ಗ್ರಾಮ ಮಟ್ಟದಿಂದ ಪ್ರಾರಂಭವಾಗಿ ಎಲ್ಲಡೆ ನಮ್ಮ ಹಕ್ಕಿನ ಅನಿವಾರ್ಯತೆ ಬಗ್ಗೆ ತಿಳಿಸಿಕೊಡುವುದು ನಮ್ಮ ಆದ್ಯ ಕರ್ತವ್ಯವೆಂದು ಹೇಳಿದರು.ಸ್ವಾಭಿಮಾನಕ್ಕಾಗಿ ಪ್ರತಿಭಟಿಸೋಣ :

ನಾಡೋಜ ಬಸವಲಿಂಗ ಪಟ್ಟದ್ದೇವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಹೋರಾಟ ನ್ಯಾಯ ಸಮ್ಮತವಾಗಿದೆ. ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ನಾವೆಲ್ಲರೂ ಸೇರಿ ಜೂ. 29ರಂದು ನಗರದಲ್ಲಿ ನಮ್ಮ ಸ್ವಾಭಿಮಾನಕ್ಕಾಗಿ ಪ್ರತಿಭಟಿಸೋಣ ಎಂದು ಕರೆ ಕೊಟ್ಟರು.

ಸಭೆಯಲ್ಲಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಹಿರಿಯರಾದ ಶಿವಶರಣಪ್ಪ ವಾಲಿ, ಬಸವರಾಜ ಜಾಬಶೆಟ್ಟಿ, ಬಿ.ಜಿ. ಶೆಟಕಾರ, ಬಾಬು ವಾಲಿ, ಡಾ. ರಜನೀಶ ವಾಲಿ, ದೀಪಕ ವಾಲಿ, ಸೋಮಶೇಖರ ಪಾಟೀಲ್‌ ಗಾದಗಿ, ಕರ್ನಲ್ ಶರಣಪ್ಪ, ಸಿಕೇನಪೂರ, ರೇವಣಸಿದ್ದಪ್ಪ ಜಲಾದೆ, ಬಸವರಾಜ ಧನ್ನೂರ, ಮಾರುತಿ ಬೌದ್ದೆ, ರಾಜು ಕೌಡ್ಯಾಳ, ವಿಜಯಕುಮಾರ ಸೋನಾರೆ, ಡಾ. ಹಾವಗಿರಾವ್‌ ಮೈಲಾರೆ, ಮಾಳಪ್ಪ ಅಡಸಾರೆ, ಮಹ್ಮದ ಆಸೀಫೋದ್ದೀನ್‌, ರಾಜೇಂದ್ರ ಮಣಗೀರೆ, ಆನಂದ ದೇವಪ್ಪ, ಶ್ರೀಕಾಂತ ಸ್ವಾಮಿ, ಭಾರತಿ ವಸ್ತ್ರದ, ಜಯದೇವಿ ಯದಲಾಪೂರೆ, ಪಾರ್ವತಿ ಸೋನಾರೆ, ವಿದ್ಯಾವತಿ ಬಲ್ಲೂರ, ಶಶಿ ಹೋಸಹಳ್ಳಿ ರವಿ ಸ್ವಾಮಿ ನಿರ್ಣಾ, ಡಾ. ಸಿ. ಆನಂದರಾವ್‌, ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಅಶೋಕ ಕರಂಜಿ, ರೇವಣಪ್ಪ ಮೂಲಗೆ, ಎಸ್‌ಎಂ ಜನವಾಡಕರ, ನಿಜಾಮೋದ್ದೀನ್‌, ಸಂತೋಷ ಜೋಳದಾಪಕೆ, ರಮೇಶ ಬಿರಾದಾರ, ಸಂಗಪ್ಪ ಹಿಪ್ಪಗಾಂವೆ, ಡಾ. ಸುಬ್ಬಣ್ಣ ಕರಕನಳ್ಳಿ, ಆನಂದ ಘಂಟೆ, ಅನಂತರೆಡ್ಡಿ, ಡಾ. ಶ್ರೀನಿವಾಸ ರಡ್ಡಿ, ಜಗದೀಶ ಬಿರಾದಾರ, ಗುರುನಾಥ ರಾಜಗೀರಾ, ಸುರೇಶ ಸ್ವಾಮಿ, ಜಾಫೇಟ್ ಕಡಿಯಾಳ, ಡಾ. ಪಿ. ವಿಠ್ಠಲ ರಡ್ಡಿ ಉಪಸ್ಥಿತರಿದ್ದರು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.

ಕಸಾಪ ಜಿಲ್ಲಾಧ್ಯಕ್ಷರು ಹಾಗೂ ಹೋರಾಟ ಸಮಿತಿ ಸಂಯೋಜಕರಾದ ಸುರೇಶ ಚೆನ್ನಶೆಟ್ಟಿ ಸ್ವಾಗತಿಸಿ ಹೋರಾಟ ಅನಿವಾರ್ಯತೆ ಬಗ್ಗೆ ಮಾತನಾಡಿದರು.

ಶಿವಶಂಕರ ಟೋಕರೆ ನಿರೂಪಿಸದರೆ, ವಿನಯಕುಮಾರ ಮಾಳಗೆ ವಂದಿಸಿದರು. ಬೀದರ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪ್ರಗತಿಪರ ಚಿಂತಕರು, ಸಾಹಿತಿಗಳು ವಿಚಾರವಂತರು ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.