- ಆಡಳಿತ ಮಂಡಳಿ ವಜಾಗೊಳಿಸಿ, ಆಡಳಿತಾಧಿಕಾರಿ ನೇಮಕಕ್ಕೆ ಆಲೂರು ನಿಂಗರಾಜ, ಎಂ.ಹಾಲೇಶ ಒತ್ತಾಯ - - -
ಕನ್ನಡಪ್ರಭ ವಾರ್ತೆ ದಾವಣಗೆರೆಮಾದಿಗ ಸಮುದಾಯದ ಶೈಕ್ಷಣಿಕ ಆಸ್ತಿಯಾದ, ರಾಷ್ಟ್ರಪಿತ ಮಹಾತ್ಮ ಗಾಂಧಿ ಕೊಟ್ಟಿರುವ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಸ್ಥೆಯ ಮಹಾತ್ಮ ಗಾಂಧಿ ವಸತಿಯುತ ಶಾಲೆ ಆಡಳಿತ ಮಂಡಳಿ ವಜಾಗೊಳಿಸಿ, ಆಡಳಿತಾಧಿಕಾರಿ ನೇಮಿಸಲು ಒತ್ತಾಯಿಸಿ ಜುಲೈ 1ರಂದು ನಗರದಲ್ಲಿ ಸಮಾಜದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಮಾಜದ ಮುಖಂಡರು ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಮುಖಂಡ ಆಲೂರು ನಿಂಗರಾಜ, ಬೆಳಗ್ಗೆ 11 ಗಂಟೆಗೆ ಶ್ರೀ ಬೀರಲಿಂಗೇಶ್ವರ ಮೈದಾನದಿಂದ ಹೊರಟು ಚೇತನಾ ಹೋಟೆಲ್ ಮಾರ್ಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಮೂಲಕ ಉಪ ವಿಭಾಗಾಧಿಕಾರಿ ಕಚೇರಿ ತಲುಪಿ, ವಿವಿಧ ಬೇಡಿಕೆ ಈಡೇರಿಸುವಂತೆ ಎಸಿ ಅವರಿಗೆ ಮನವಿ ಅರ್ಪಿಸಲಾಗುವುದು ಎಂದರು.ಗಾಂಧೀಜಿ ಆಶಯದಂತೆ 1932ರಲ್ಲಿ ಆ ಮಹಾತ್ಮ ನಡೆದ ಜಾಗವನ್ನು ಮಾದಿಗ ಸಮುದಾಯದ ಬಡ, ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಊರಿನ ಹಿರಿಯರು ನೀಡಿದ್ದರು. ಈ ಮೂಲಕ ಸಮಾಜಕ್ಕೆ ಗಾಂಧೀಜಿ ನ್ಯಾಯ ಕೊಡಿಸಿದ್ದರು. ಸಂಸ್ಥೆಯಲ್ಲಿ ಆಡಳಿತಾತ್ಮಕ ಅವ್ಯವಸ್ಥೆ, ಶಾಲಾ ಜಾಗ ದುರುಪಯೋಗ ತಾಂಡವವಾಡುತ್ತಿದೆ. ಶಾಲೆ ಜಾಗದಲ್ಲಿ ಪಾಲಿಕೆ ಅನುಮತಿ ಪಡೆಯದೇ, ವಾಣಿಜ್ಯ ಮಳಿಗೆ ನಿರ್ಮಿಸಲಾಗುತ್ತಿದೆ. ಸಂಸ್ಥೆಯಲ್ಲಿ ಸಮಾಜ ಬಾಂಧವರಿಗೆ ಮುಕ್ತ ಸದಸ್ಯತ್ವ ನೀಡುವ ಕೆಲಸವಾಗಿಲ್ಲ. ಸಂಸ್ಥೆಯ ಆಡಳಿತ ವ್ಯವಸ್ಥೆ ವಿರುದ್ಧ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಈ ಹಿಂದೆ ಡಾ. ಬಿ.ಎಂ. ತಿಪ್ಪೇಸ್ವಾಮಿ ಅವರ ಪುತ್ರ ಬಿ.ಟಿ. ಮಲ್ಲಿಕಾರ್ಜುನ ಅವರು ಸಂಸ್ಥೆ ನಡೆಸಿದಾಗ ಇಡೀ ಸಮಾಜ ಹೋರಾಡಿದ್ದರಿಂದ ಸರ್ಕಾರ ಆಡಳಿತಾಧಿಕಾರಿ ನೇಮಿಸಿತ್ತು. ಆಗ ವಿಶೇಷ ಆಹ್ವಾನಿತರಾಗಿದ್ದ ಕೆಲವರು ಸಂಸ್ಥೆ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಗ್ರಾಮೀಣರಿಗೆ ಅವಕಾಶ ನೀಡುವಂತೆ ಹೇಳಿ, ನಾವೆಲ್ಲರೂ ಹೊರಬಂದಿದ್ದೆವು. ನಮ್ಮನ್ನು ಹೊರಹಾಕಿ, ಈಗ ನಾಲ್ಕೈದು ಕುಟುಂಬಗಳೇ ಇಡೀ ಸಂಸ್ಥೆ ಮೇಲೆ ಹಿಡಿತ ಸಾಧಿಸಿವೆ. 2 ಲಕ್ಷ ಜನ ಸಂಖ್ಯೆಯನ್ನು ನಗರದಲ್ಲಿ ಹೊಂದಿರುವ ಮಾದಿಗ ಸಮುದಾಯವನ್ನು ಹೆದರಿಸಿ, ಬೆದರಿಸಿ ಸಂಸ್ಥೆ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲು ಹೊರಟಿದ್ದಾರೆ ಎಂದು ದೂರಿದರು.
ಸಂಸ್ಥೆಯ ಆಡಳಿತ ಮಂಡಳಿ ವಿರುದ್ಧ ಹೋರಾಟ ಆರಂಭಿಸಿದ ಚೇತನ್ ಕನ್ನಡಿಗನಿಗೆ ಬೆದರಿಕೆ ಕರೆ ಮಾಡಲಾಗಿದೆ. ಆತನಿಗೆ ಆಸೆ, ಆಮಿಷವೊಡ್ಡುವ ಕೆಲಸವಾಗಿದೆ. ಆದರೂ, ಅದೇ ಚೇತನ ವಿರುದ್ಧ ಸುಳ್ಳು ಹೇಳಿ, ಕೇಸ್ ಮಾಡಿಸುವ ಕೆಲಸ ನಡೆದಿದೆ. ಈಗಾಗಲೇ ನಾವು 2-3 ಸಭೆ ಮಾಡಿದ್ದೇವೆ. ಮುಂದಿನ ವಾರ ನಡೆಯುವ ಹೋರಾಟದ ಮೂಲಕ ಜಿಲ್ಲಾ ನೋಂದಣಾಧಿಕಾರಿಗಳು, ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸುತ್ತೇನೆ. ಕಾನೂನು ಹೋರಾಟವನ್ನೂ ನಡೆಸುತ್ತೇವೆ. ನಮ್ಮ ಆರೋಪ ಸುಳ್ಳೆಂದು ಯಾರಾದರೂ ಹೇಳಿದರೆ, ಅಂತಹವರಿಂದ ಅಧಿಕೃತ ದಾಖಲೆ ಕೇಳಿ ಎಂದು ಆಲೂರು ನಿಂಗರಾಜ ತಿಳಿಸಿದರು.
ಸಮಾಜದ ಹಿರಿಯ ಮುಖಂಡ, ಪಾಲಿಕೆ ಮಾಜಿ ಸದಸ್ಯ ಎಂ.ಹಾಲೇಶ ಮಾತನಾಡಿ, ಡಾ. ಬಿ.ಎಂ. ತಿಪ್ಪೇಸ್ವಾಮಿ ಹರಿಜನ ಮಕ್ಕಳಿಗಾಗಿ, ಗ್ರಾಮೀಣ ಮಕ್ಕಳಿಗಾಗಿ ಶಾಲೆ ಆರಂಭಿಸಿದ್ದರು. ಈಗ ಸಂಸ್ಥೆಯ ಕಮರ್ಷಿಯಲ್ ಆಗಿದೆ. ಈ ಹಿಂದೆ ಸಾವಿರಾರು ವಿದ್ಯಾರ್ಥಿಗಳು ಇರುತ್ತಿದ್ದ ಸಂಸ್ಥೆಯಲ್ಲಿ ಈಗ 65 ಮಕ್ಕಳಿವೆ. ಮಾಜಿ ಸಚಿವ ಎಚ್.ಆಂಜನೇಯ, ಮಾಯಕೊಂಡ ಕೆ.ಎಸ್.ಬಸವಂತಪ್ಪ ಸಂಸ್ಥೆಗೆ ಬಂದು ಹದಗೆಟ್ಟ ವ್ಯವಸ್ಥೆ ಸರಿಪಡಿಸಲಿ. ಶೇ.70 ಸೀಟುಗಳನ್ನು ಗ್ರಾಮೀಣ ಮಕ್ಕಳಿಗೆ ಮೀಸಲಿಡುವಂತೆ ನೋಡಿಕೊಳ್ಳಬೇಕು. ಶಾಸಕರಾದ ಎಸ್.ಎಸ್. ಮಲ್ಲಿಕಾರ್ಜುನ, ಸಮರ್ಥ ಶಾಮನೂರು ಸಹ ಸಂಸ್ಥೆಯ ಕೆಲವರಿಗೆ ಬುದ್ಧಿ ಹೇಳಲಿ ಎಂದರು.ಸಂಸ್ಥೆ ಆಡಳಿತ ಮಂಡಳಿ ವಿರುದ್ಧ ನ್ಯಾಯಾಂಗ ತನಿಖೆ ಆಗಬೇಕು. ಆಡಳಿತ ಮಂಡಳಿಯನ್ನು ರದ್ದುಪಡಿಸಬೇಕು. ಕಳೆದ 2 ದಶಕದಿಂದ ಸಂಸ್ಥೆಗೆ ಸಮಾಜ ಕಲ್ಯಾಣ ಇಲಾಖೆ, ಶಾಸಕ, ಸಂಸದರು, ವಿಪ ಸದಸ್ಯರ ಅನುದಾನ, ವಿವಿಧ ಇಲಾಖೆಗಳಿಂದ ಬಂದ ಅನುದಾನ ಎಷ್ಟು, ಇಲಾಖೆಗಳಿಂದ ಎರಡೆರೆಡು ಸಲ ಅನುದಾನ ಪಡೆದ ಬಗ್ಗೆ ಸಮಗ್ರ ತನಿಖೆಯಾದರೆ ಕನಿಷ್ಠ 10-15 ಅಧಿಕಾರಿಗಳೂ ಸಸ್ಪೆಂಡ್ ಆಗುತ್ತಾರೆ. ಪಾಲಿಕೆ ಅನುದಾನವೂ ದುರ್ಬಳಕೆಯಾದ ಅನುಮಾನವಿದೆ. ಈ ಬಗ್ಗೆ ಸಮಗ್ರ ತನಿಖೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಮಾಜದ ಮುಖಂಡರಾದ ಪಾಲಿಕೆ ಮಾಜಿ ಸದಸ್ಯ ಉದಯಕುಮಾರ, ಎಚ್.ಮಲ್ಲೇಶ, ಟಿ.ಬಸವರಾಜ, ದುಗ್ಗಪ್ಪ, ರಾಘವೇಂದ್ರ ಕಡೇಮನಿ, ಚಿಕ್ಕನಹಳ್ಳಿ ನಿಂಗರಾಜ, ಎಲ್ಐಸಿ ಶಿವಣ್ಣ, ಎಚ್.ಸಿ.ಮಲ್ಲಪ್ಪ, ಕಮಾರ, ಜಯಣ್ಣ, ನಾಗರಾಜ, ಕೆಟಿಜೆ ನಗರ ದುಗ್ಗಪ್ಪ, ಹಾಲೇಶ, ಕೆ.ಡಿ.ಆನಂದ, ಚೇತನ್ ಕನ್ನಡಿಗ ಇತರರು ಇದ್ದರು.- - -
-25ಕೆಡಿವಿಜಿ6: ದಾವಣಗೆರೆಯಲ್ಲಿ ಗುರುವಾರ ಮಾದಿಗ ಸಮುದಾಯದ ಮುಖಂಡರಾದ ಆಲೂರು ನಿಂಗರಾಜ, ಎಂ.ಹಾಲೇಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.