ಗೋ ಸಂರಕ್ಷಣಾ ಕಾನೂನಿಗೆ ತಿದ್ದುಪಡಿ ಖಂಡಿಸಿ ವಿಶ್ವ ಹಿಂದು ಪರಿಷತ್ ತಾಲೂಕು ಘಟಕ ಹಾಗೂ ಬಜರಂಗ ದಳದ ವತಿಯಿಂದ ಪಟ್ಟಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ । ಇನ್ನಷ್ಟು ಕಠೋರ ಕಾನೂನು ತರಲು ಆಗ್ರಹ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಗೋ ಸಂರಕ್ಷಣಾ ಕಾನೂನಿಗೆ ತಿದ್ದುಪಡಿ ಖಂಡಿಸಿ ವಿಶ್ವ ಹಿಂದು ಪರಿಷತ್ ತಾಲೂಕು ಘಟಕ ಹಾಗೂ ಬಜರಂಗ ದಳದ ವತಿಯಿಂದ ಪಟ್ಟಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ವಿ.ಹಿಂ.ಪ ತಾಲೂಕಾಧ್ಯಕ್ಷ ಗಜಾನನ ನಾಯ್ಕ ತಳ್ಳಿಕೇರಿ ಮಾತನಾಡಿ, ಗೋ ಹತ್ಯೆ ತಡೆಯಲು ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಕಠೋರವಾದ ಗೋ ಹತ್ಯಾ ನಿಷೇಧ ಕಾನೂನು ಜಾರಿಗೆ ತಂದಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ದುರ್ಬಲಗೊಳಿಸಿ, ಗೋ ಹತ್ಯೆಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಾನೂನಿಗೆ ತಿದ್ದುಪಡಿ ತರಲು ಮುಂದಾಗಿದೆ. ಇದರ ವಿರುದ್ಧ ನಾವೆಲ್ಲರೂ ಧ್ವನಿ ಎತ್ತಬೇಕು ಎಂದರು.

ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ಮಾತನಾಡಿ, ಸಿದ್ದರಾಮಯ್ಯನವರ ಸರ್ಕಾರ ಗೋ ಸಂರಕ್ಷಣಾ ಕಾನೂನನ್ನು ತಿದ್ದುಪಡಿ ಮಾಡಿ, ಗೋ ಕಳ್ಳರಿಗೆ ಅನುಕೂಲ ಮಾಡಲು ಹೊರಟಿದೆ. ಹಿಂದಿನ ಕಾನೂನಿನಲ್ಲಿರುವ ದೋಷ ಇದ್ದರೆ, ಅದನ್ನು ತಿದ್ದಿ ಇನ್ನಷ್ಟು ಕಠೋರ ಕಾನೂನು ತರಲಿ. ಗೋ ಹಂತಕರಿಗೆ ಅನುಕೂಲವಾಗುವಂತೆ ತಿದ್ದುಪಡಿ ಬೇಡವೇ ಬೇಡ ಎಂದರು.

ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ರಾಜ್ಯ ಸರ್ಕಾರ ಹಿಂದುಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಲೇ ಬಂದಿದೆ. ಬಹುಸಂಖ್ಯಾತ ಹಿಂದುಗಳ ಭಾವನೆ, ನಂಬಿಕೆಯ ಮೇಲೆ ಬಲವಾದ ಪ್ರಹಾರ ಮಾಡುವ ಮೂಲಕ ಹಿಂದುಗಳಿಗೆ ಅನ್ಯಾಯ ಮಾಡುತ್ತಿರುವುದು, ಸಂವಿಧಾನದ ಆಶಯಕ್ಕೆ ವಿರುದ್ಧವಾದ ನಡೆಯಾಗಿದೆ. ಕಾಯಿದೆ ಯಾವುದೇ ಬರಲಿ, ಅನುಷ್ಠಾನ ಮಾಡಬೇಕಾದವರು ಅಧಿಕಾರಿಗಳು. ಪೊಲೀಸರು ಕಟ್ಟೆಚ್ಚರ ವಹಿಸಿ ಚೆಕ್ ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಅಕ್ರಮ ಗೋ ಸಾಗಣೆ ತಡೆಯುವ ಕ್ರಮ ಆಗಬೇಕು ಎಂದರು.

ವಿ.ಹಿಂ.ಪ ಹಾಗೂ ಭಜರಂಗದಳಗಳ ಪ್ರಮುಖರಾದ ರಾಮಕೃಷ್ಣ ಭಟ್ಟ ಕವಡಿಕೆರೆ, ನಾರಾಯಣ ಸಭಾಹಿತ, ಮಹೇಶ ನಾಯ್ಕ, ಅನಂತ ಗಾಂವ್ಕರ ಕಂಚಿಪಾಲ, ರವಿ ದೇವಡಿಗ, ವಿ.ಟಿ. ಭಟ್ಟ, ಜಿ.ಎನ್ ಭಾಗವತ, ಮಹಾಬಲೇಶ್ವರ ಭಟ್ಟ ಶೀಗೆಪಾಲ, ನಾರಾಯಣ ನಾಯಕ, ಪ್ರಭಾಕರ ನಾಯ್ಕ, ವಿಜು ಆಚಾರಿ, ಅಮೃತ ಬದ್ದಿ, ಗಿರೀಶ ಭಾಗ್ವತ ಇತರರಿದ್ದರು.