ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಬೆಳಗಾವಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಎತ್ತಿನ ಚಕ್ಕಡಿ, ಟ್ರ್ಯಾಕ್ಟರ್ ಸಮೇತರಾಗಿ ಪಾಲ್ಗೊಂಡ ಪ್ರತಿಭಟನಾಕಾರರು ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ರಸಗೊಬ್ಬರ ಕೃತಕ ಕೊರತೆ ಸೃಷ್ಟಿಯಾಗಿದ್ದು, ಲಕ್ಷಾಂತರ ಮೆಟ್ರಿಕ್ ಟನ್ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ಆರೋಪಿಸಿದರು.ಕೇಂದ್ರ ಸರ್ಕಾರ ನೀಡುತ್ತಿರುವ ಯೂರಿಯಾ ಗೊಬ್ಬರವನ್ನು ರೈತರಿಗೆ ನೀಡದೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿ ಅನ್ನದಾತನಿಗೆ ಅನ್ಯಾಯವೆಸಗುತ್ತಿದೆ. ಉಳುಮೆ ಮಾಡುವ ಅನ್ನದಾತನಿಗೆ ನಾವು ಕೊಡುತ್ತಿದ್ದ ₹4000 ಸಾವಿರ ಕಿತ್ತುಕೊಂಡ ಈ ಸರ್ಕಾರ, ಬಡ ರೈತ ಮಕ್ಕಳ ವಿದ್ಯಾನಿಧಿಯನ್ನೂ ಹೊಸಕಿ ಹಾಕಿತು. ಗ್ಯಾರಂಟಿ ಹೆಸರಲ್ಲಿ ಗೋರಂಟಿ ಹಚ್ಚಿ ನಾಡಿನ ರೈತರ ಬದುಕಿದೆ ಕೊಳ್ಳಿ ಇಟ್ಟಿದೆ ಎಂದು ದೂರಿದರು.ಎರಡು ವರ್ಷದಿಂದ ರೈತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಿಜೆಪಿ ಸರ್ಕಾರ ನೀಡುತ್ತಿದ್ದ ರೈತ ವಿದ್ಯಾನಿಧಿ ನಿಲ್ಲಿಸಿದೆ. 52 ಲಕ್ಷ ರೈತರಿಗೆ ಬಿಜೆಪಿ ಸರ್ಕಾರ ನೀಡುತ್ತಿದ್ದ ₹ 4000 ಕಿಸಾನ್ ಸಮ್ಮಾನ್ ನಿಧಿಯನ್ನು ನಿಲ್ಲಿಸಿದೆ. ರೈತರ ಕೃಷಿ ಪಂಪ್‌ಸೆಟ್‌ಗೆ ಟ್ರಾನ್ಸ್ಪಾರ್ಮರ್ ಅಳವಡಿಸಲು ಬಿಜೆಪಿ ಸರ್ಕಾರದಲ್ಲಿ ₹25000 ನಿಗಧಿಪಡಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಒಂದು ಪಂಪ್‌ಸೆಟ್‌ಗೆ ಟ್ರಾನ್ಸ್ಪಾರ್ಮರ್ ಅಳವಡಿಸಲು ₹3 ಲಕ್ಷ ನೀಡಬೇಕಾಗಿದೆ. ಕರ್ನಾಟಕದಲ್ಲಿ ಬಿತ್ತನೆ ಬೀಜದ ಮೇಲಿನ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ ಶೇ.20 ರಷ್ಟು ಏರಿಕೆ ಮಾಡಲಾಗಿದೆ. ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ನೀಡಿದ ₹3454 ಕೋಟಿ ಅನುದಾನದಲ್ಲಿ ನಯಾಪೈಸೆಯನ್ನು ರಾಜ್ಯದ ರೈತರಿಗೆ ತಲುಪಿಸದೆ ಲೂಟಿ ಹೊಡೆದಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಕರ್ನಾಟಕ ರಾಜ್ಯಕ್ಕೆ ಯುರಿಯಾ ರಸಗೊಬ್ಬರವು 6.30 ಲಕ್ಷ ಮೆಟ್ರಿಕ್ ಟನ್ ಅವಶ್ಯಕತೆ ಇದ್ದು, ಕೇಂದ್ರ ಸರ್ಕಾರ 8.73 ಲಕ್ಷ ಮೆಟ್ರಿಕ್ ಟನ್
ರಸಗೊಬ್ಬರವನ್ನು ಅವಶ್ಯಕತೆಗಿಂತ ಹೆಚ್ಚಿಗೆ ಕರ್ನಾಟಕಕ್ಕೆ ನೀಡಿರುತ್ತದೆ. ಉಳಿದ 2.43 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ರಾಜ್ಯದ ರೈತರಿಗೆ ನೀಡದೆ ಕಾಳಸಂತೆಯಲ್ಲಿ ಕಾಂಗ್ರೆಸ್ ಸರ್ಕಾರ ಮಾರಾಟ ಮಾಡುತ್ತಿದೆ. ಕಳೆದ 2 ವರ್ಷಗಳ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 3400ಕ್ಕಿಂತ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.ಭೂ ಸಿರಿ ಯೋಜನೆಯಡಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹10000 ನೀಡುವ ಪ್ರೋತ್ಸಾಹಧನವನ್ನು ನಿಲ್ಲಿಸಿದ್ದಾರೆ. ರೈತರಿಗೆ ನೀಡಬೇಕಾದ ಹಾಲಿನ ಪ್ರೋತ್ಸಾಹ ಧನವನ್ನು ಕಾಂಗ್ರೆಸ್ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಹಾವೇರಿ ಮತ್ತು ರಾಣಿಬೆನ್ನೂರಿನಲ್ಲಿ ರಸಗೊಬ್ಬರ ಖರೀದಿಸಲು ಮುಂದಾಗಿದ್ದ ರೈತರಿಗೆ ಪೊಲೀಸರು ಲಾಟಿ ಚಾರ್ಜ್ ಮಾಡಿರುವುದನ್ನು ಬಿಜೆಪಿಯು ತೀವ್ರವಾಗಿ ಖಂಡಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ರಸಗೊಬ್ಬರದ ಅವೈಜ್ಞಾನಿಕವಾಗಿ ದಾಸ್ತಾನು ಶೇಖರಣೆ ಮಾಡಿರುವ ಪರಿಣಾಮವಾಗಿ ಕರ್ನಾಟಕ ಎಲ್ಲ ಜಿಲ್ಲಾದ್ಯಂತ ರಸಗೊಬ್ಬರದ ಅಭಾವ ಉಂಟಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಕೊಪ್ಪಳದಲ್ಲಿ ರೈತನೊಬ್ಬ ಗೊಬ್ಬರ ಸಿಗುತ್ತಿಲ್ಲ ಎಂದು ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಶಾಪ ಸರ್ಕಾರಕ್ಕೆ ತಟ್ಟದೇ ಇರದು. ರಾಜ್ಯ ಸರ್ಕಾರದ ಕೃಷಿ ಸಚಿವರು ಮತ್ತು ಇಲಾಖೆ ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಎಂ.ಬಿ.ಜಿರಲಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ವಿಶ್ವನಾಥ ಪಾಟೀಲ, ಮಹಾಂತೇಶ ದೊಡ್ಡಗೌಡ್ರ, ಜಗದೀಶ ಬೂದಿಹಾಳ, ಮಹಾಂತೇಶ ವಕ್ಕುಂದ ಮೊದಲಾದವರು ಪಾಲ್ಗೊಂಡಿದ್ದರು.