ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ. ರಘು ಮಾತನಾಡಿ, ಕರ್ನಾಟಕದಲ್ಲಿ ಉತ್ಪಾದನೆಯಾಗುವ ತಂಬಾಕಿಗೆ ಉತ್ತಮ ಭವಿಷ್ಯ ಮತ್ತು ಭಾರಿ ಬೇಡಿಕೆ ಇದ್ದರೂ ಸಹ ಕಂಪನಿಗಳು ನ್ಯಾಯಸಮ್ಮತ ಬೆಲೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ತಂಬಾಕು ವಿಶಿಷ್ಟ ಗುಣಮಟ್ಟ ಹೊಂದಿದ್ದು, ಅದರಲ್ಲಿ ಉತ್ತಮ ರೀತಿಯ ಆಯಿಲ್ ನಿಕೋಟಿನ್ ಅಂಶ ಹಾಗೂ ಅತ್ಯಲ್ಪ ಕ್ಲೋರೈಡ್ ಅಂಶ ಇರುವುದರಿಂದ ದೇಶಿ-ವಿದೇಶಿ ಮಾರುಕಟ್ಟೆಗಳಲ್ಲಿ ವಿಶೇಷ ಬೇಡಿಕೆ ಇದೆ. ಆದರೂ ಸಹ ಕಂಪನಿಗಳು ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ಬೆಲೆ ನಿಗದಿ ಮಾಡುತ್ತಿಲ್ಲ ಎಂದು ದೂರಿದರು.

ಕನ್ನಡಪ್ರಭ ವಾರ್ತೆ ಹಾಸನ

ರಾಜ್ಯದ ತಂಬಾಕು ಬೆಳೆಗಾರರನ್ನು ಸಂಕಷ್ಟಕ್ಕೆ ಒಳಪಡಿಸುತ್ತಿರುವ ನೀತಿಗಳನ್ನು ಖಂಡಿಸಿ, ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ತಂಬಾಕು ರೈತರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಕೆ. ರಘು ಮಾತನಾಡಿ, ಕರ್ನಾಟಕದಲ್ಲಿ ಉತ್ಪಾದನೆಯಾಗುವ ತಂಬಾಕಿಗೆ ಉತ್ತಮ ಭವಿಷ್ಯ ಮತ್ತು ಭಾರಿ ಬೇಡಿಕೆ ಇದ್ದರೂ ಸಹ ಕಂಪನಿಗಳು ನ್ಯಾಯಸಮ್ಮತ ಬೆಲೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ತಂಬಾಕು ವಿಶಿಷ್ಟ ಗುಣಮಟ್ಟ ಹೊಂದಿದ್ದು, ಅದರಲ್ಲಿ ಉತ್ತಮ ರೀತಿಯ ಆಯಿಲ್ ನಿಕೋಟಿನ್ ಅಂಶ ಹಾಗೂ ಅತ್ಯಲ್ಪ ಕ್ಲೋರೈಡ್ ಅಂಶ ಇರುವುದರಿಂದ ದೇಶಿ-ವಿದೇಶಿ ಮಾರುಕಟ್ಟೆಗಳಲ್ಲಿ ವಿಶೇಷ ಬೇಡಿಕೆ ಇದೆ. ಆದರೂ ಸಹ ಕಂಪನಿಗಳು ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ಬೆಲೆ ನಿಗದಿ ಮಾಡುತ್ತಿಲ್ಲ ಎಂದು ದೂರಿದರು. ತಂಬಾಕು ಉತ್ಪಾದನಾ ವೆಚ್ಚ ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಹೆಚ್ಚುತ್ತಿದೆ. ಆರಂಭಿಕ ಹಂತದಲ್ಲೇ ರಸಗೊಬ್ಬರ, ಟ್ರೇಗಳು, ಕೋಕೋಫಿಟ್, ಔಷಧಿಗಳು, ಬಿತ್ತನೆ ಬೀಜ, ಕಾರ್ಮಿಕರ ಕೂಲಿ ಸೇರಿದಂತೆ ಕಚ್ಚಾ ಪದಾರ್ಥಗಳ ವೆಚ್ಚ ಏರಿಕೆಯಾಗುತ್ತಿದೆ. ಬೆಳೆ ಕಟಾವು ನಂತರ ತಂಬಾಕು ಬೇಯಿಸಲು ಬೇಕಾದ ಸೌದೆ, ಕೂಲಿ, ಬೇಲ್ ಮಾಡುವ ಖರ್ಚು ಹಾಗೂ ಇತರೆ ಅಂತಿಮ ಹಂತದ ವೆಚ್ಚಗಳು ರೈತರ ಮೇಲೆ ಭಾರವಾಗಿವೆ. ಈ ಎಲ್ಲಾ ವೆಚ್ಚಗಳನ್ನು ಲೆಕ್ಕಹಾಕಿದರೆ ಪ್ರತಿ ಕೆ.ಜಿ. ತಂಬಾಕಿಗೆ ಕನಿಷ್ಠ ರು. ೩೫೦ ದೊರೆತರೆ ಮಾತ್ರ ರೈತರಿಗೆ ಸಮರ್ಪಕ ಆದಾಯ ಸಾಧ್ಯವಾಗುತ್ತದೆ ಎಂದರು.೨೦೨೪-೨೫ನೇ ಸಾಲಿನಲ್ಲಿ ಕಂಪನಿಗಳು ಕರ್ನಾಟಕದಲ್ಲಿ ತಂಬಾಕನ್ನು ಸರಾಸರಿ ರು. ೨೫೦ ದರಕ್ಕೆ ಮಾತ್ರ ಖರೀದಿಸಿವೆ. ತಂಬಾಕು ಉತ್ಪಾದನಾ ವೆಚ್ಚವೇ ರು. ೨೨೦ ಪ್ರತಿ ಕೆ.ಜಿ. ಆಗಿರುವುದರಿಂದ, ರೈತರಿಗೆ ಕೇವಲ ರು. ೩೦ ಮಾತ್ರ ಲಾಭ ಉಳಿದಿದೆ. ಇದು ರೈತರ ಬದುಕನ್ನು ತೀವ್ರವಾಗಿ ಸಂಕಷ್ಟಕ್ಕೆ ತಳ್ಳಿದೆ. ೨೦೨೫-೨೬ನೇ ಸಾಲಿನಲ್ಲಿ ತಂಬಾಕು ಮಂಡಳಿಯು ಗರಿಷ್ಠ ೧೦೦ ಮಿಲಿಯನ್ ಕೆ.ಜಿ. ತಂಬಾಕು ಬೆಳೆಯಲು ಅನುಮತಿ ನೀಡಿದ್ದರೂ, ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಉತ್ಪಾದನೆಗೆ ಹಿನ್ನಡೆ ಉಂಟಾಗಿದೆ. ಇದರ ಪರಿಣಾಮವಾಗಿ ಈ ವರ್ಷ ಕೇವಲ ೮೦ರಿಂದ ೮೫ ಮಿಲಿಯನ್ ಕೆ.ಜಿ. ತಂಬಾಕು ಉತ್ಪಾದನೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.ಮೈಸೂರು ವಲಯದ ತಂಬಾಕು ಬೆಳೆಗಾರರಲ್ಲಿ ಹೆಚ್ಚಿನವರು ಸಣ್ಣ ಮತ್ತು ಮಧ್ಯಮ ವರ್ಗದ ರೈತರಾಗಿದ್ದು, ೨ರಿಂದ ೩ ಹೆಕ್ಟೇರ್‌ಗಿಂತ ಕಡಿಮೆ ಜಮೀನು ಹೊಂದಿದ್ದಾರೆ. ಹುಣಸೂರು, ಪಿರಿಯಾಪಟ್ಟಣ, ರಾಮನಾಥಪುರ, ಎಚ್.ಡಿ. ಕೋಟೆ ಸೇರಿದಂತೆ ಮೈಸೂರು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳು ಪ್ರಮುಖ ತಂಬಾಕು ಬೆಳೆಯುವ ಪ್ರದೇಶಗಳಾಗಿವೆ. ಈ ವಲಯದಲ್ಲಿ ೪೦ ಸಾವಿರಕ್ಕೂ ಹೆಚ್ಚು ನೋಂದಾಯಿತ ತಂಬಾಕು ಬೆಳೆಗಾರರು ಇದ್ದು, ಸುಮಾರು ೫೦ ಸಾವಿರ ಬ್ಯಾರನ್‌ಗಳನ್ನು ಹೊಂದಿ ೬೫ ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತಂಬಾಕು ಬೆಳೆಯುತ್ತಿದ್ದಾರೆ ಎಂದರು.

ದೀರ್ಘಕಾಲದಿಂದ ಈ ಪ್ರದೇಶದಲ್ಲಿ ತಂಬಾಕು ಪ್ರಮುಖ ವಾಣಿಜ್ಯ ಬೆಳೆಯಾಗಿ ಉಳಿದುಕೊಂಡಿದ್ದು, ಪಂಪ್‌ಸೆಟ್ ಹಾಗೂ ಮಳೆಯ ಆಧಾರಿತ ಹವಾಮಾನದಲ್ಲಿಯೇ ಬೆಳೆಸಲಾಗುತ್ತಿದೆ. ತಂಬಾಕಿಗೆ ಸಮಾನವಾದ ಆದಾಯ ತರುವ ಬೇರೆ ಯಾವುದೇ ಪರ್ಯಾಯ ಬೆಳೆಗಳಿಲ್ಲ. ಆದ್ದರಿಂದ ತಂಬಾಕು ಬೆಲೆ, ಉತ್ಪಾದನೆ ಹಾಗೂ ಮಾರುಕಟ್ಟೆ ನೀತಿಗಳು ರೈತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಮಧ್ಯಪ್ರವೇಶ ಮಾಡಿ ಕಂಪನಿಗಳ ಮೇಲೆ ನಿಯಂತ್ರಣ ಹೇರಬೇಕು, ತಂಬಾಕಿಗೆ ಕನಿಷ್ಠ ಬೆಲೆ ನಿಗದಿ ಮಾಡಬೇಕು ಹಾಗೂ ರೈತರಿಗೆ ಸಮರ್ಪಕ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಶೆಟ್ಟಿ, ತಾಲೂಕು ಅಧ್ಯಕ್ಷ ಯು. ಎಲ್. ಶಾಂತರಾಜ್ ಅರಸು, ಹೊಳೆನರಸೀಪುರ ತಾಲೂಕು ಅಧ್ಯಕ್ಷ ಸೋಮಶೇಖರ್‌, ಅರಕಲಗೂಡು ತಾಲೂಕು ಅಧ್ಯಕ್ಷ ರವಿ, ಹಿರಿಸಾವೆ ಶ್ರೀಧರ್, ಎಚ್.ಎಂ. ದಶರಥ ಇತರರು ಉಪಸ್ಥಿತರಿದ್ದರು.