ಅರೇಹಳ್ಳಿ ಗ್ರಾಮ ಪಂಚಾಯತ್‌ ವಿರುದ್ಧ ಪ್ರತಿಭಟನೆ

| Published : Nov 07 2024, 11:48 PM IST / Updated: Nov 07 2024, 11:49 PM IST

ಅರೇಹಳ್ಳಿ ಗ್ರಾಮ ಪಂಚಾಯತ್‌ ವಿರುದ್ಧ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮ ಪಂಚಾಯಿತಿಯು ಸಾರ್ವಜನಿಕ ಆಸ್ತಿಯನ್ನು ರಕ್ಷಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ಅರೇಹಳ್ಳಿಯಲ್ಲಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಈ ವೇಳೆ ಸ್ಥಳಕ್ಕಾಗಮಿಸಿದ ತಹಸೀಲ್ದಾರ್‌ ಮಮತಾ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ತಹಸೀಲ್ದಾರ್‌ ಸ್ಥಳಕ್ಕಾಗಮಿಸಿ ಒತ್ತುವರಿ ಜಾಗವನ್ನು ಮತ್ತೊಮ್ಮೆ ಪರಿಶೀಲಿಸಿ ಸೂಕ್ತ ನ್ಯಾಯ ಒದಗಿಸಬೇಕೆಂದು ಬಿಗಿ ಪಟ್ಟು ಹಿಡಿದು ಬಿರು ಬಿಸಿನಲ್ಲಿ ಗ್ರಾಪಂ ಅಧಿಕಾರಿಗಳ ಹಾಗೂ ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ಬೇಲೂರು ಗ್ರಾಮ ಪಂಚಾಯಿತಿಯು ಸಾರ್ವಜನಿಕ ಆಸ್ತಿಯನ್ನು ರಕ್ಷಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ಅರೇಹಳ್ಳಿಯಲ್ಲಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಈ ವೇಳೆ ಸ್ಥಳಕ್ಕಾಗಮಿಸಿದ ತಹಸೀಲ್ದಾರ್‌ ಮಮತಾ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಸರ್ವೆ ನಂ.13ರಲ್ಲಿ ಸಂತೆ ನಡೆಯುವ 36 ಗುಂಟೆ ಜಾಗವನ್ನು ಒತ್ತುವರಿ ಮಾಡಿದ್ದು, ಗ್ರಾಮಾಡಳಿತ ಮಂಡಳಿಯು ಸಾರ್ವಜನಿಕ ಆಸ್ತಿಯನ್ನು ರಕ್ಷಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ, ಪ್ರಗತಿಪರ ಸಂಘಟನೆಗಳು ಬೇಲೂರು ತಾಲೂಕಿನ ಅರೇಹಳ್ಳಿಯ ವಿನಾಯಕ ಭವನದಲ್ಲಿ ಗ್ರಾಮ ಸಭೆಯು ನಡೆಯುತ್ತಿದ್ದಂತೆ ತೀವ್ರ ಪ್ರತಿಭಟನೆ ನಡೆಸಿದ್ದವು. ಖುದ್ದು ತಾಪಂ ಇಒ, ತಹಸೀಲ್ದಾರ್‌ ಸ್ಥಳಕ್ಕಾಗಮಿಸಿ ಒತ್ತುವರಿ ಜಾಗವನ್ನು ಮತ್ತೊಮ್ಮೆ ಪರಿಶೀಲಿಸಿ ಸೂಕ್ತ ನ್ಯಾಯ ಒದಗಿಸಬೇಕೆಂದು ಬಿಗಿ ಪಟ್ಟು ಹಿಡಿದು ಬಿರು ಬಿಸಿನಲ್ಲಿ ಗ್ರಾಪಂ ಅಧಿಕಾರಿಗಳ ಹಾಗೂ ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕಿದರು.

ತಹಸೀಲ್ದಾರ್‌ ಎಂ.ಮಮತಾ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಈ ವೇಳೆ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ವೆ ನಂ.13ರಲ್ಲಿರುವ ಸಮಸ್ಯೆ ಈಗಾಗಲೆ ನಮ್ಮ ಗಮನಕ್ಕೆ ಬಂದಿದೆ. ಒತ್ತುವರಿ ಜಾಗವನ್ನು ಖುಲ್ಲಾ ಮಾಡಿಸುವಂತೆ ಆದೇಶ ನೀಡಿದ್ದರೂ ಸಹ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಇದು ಸಾಧ್ಯವಾಗಿಲ್ಲ. ಒತ್ತುವರಿದಾರರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದರಿಂದ ಕಾನೂನಿನ ವಿರುದ್ಧವಾಗಿ ಕೆಲಸ ಮಾಡುವುದು ಅಸಾಧ್ಯ. ಹಾಗಾಗಿ ವಕೀಲರನ್ನು ಸಂಪರ್ಕಿಸಿ ತಡೆಯಾಜ್ಞೆ ಸಂಬಂಧ ಮಾಹಿತಿ ಪಡೆದು ವೆಕೇಟ್ ಮಾಡಿಸಿದ ಬಳಿಕ ನಾನೇ ಖುದ್ದಾಗಿ ಸ್ಥಳಕ್ಕಾಗಿಸಿ ಒತ್ತುವರಿ ಜಾಗವನ್ನು ಖುಲ್ಲಾ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ದಸಂಸ ಮುಖಂಡ ನಿಂಗರಾಜು, ಸಿದ್ದರಾಜು, ಅಣ್ಣಪ್ಪ, ಮೆಹಬೂಬ್ ಷರೀಫ್, ವೆಂಕಟೇಶ್, ಪಿಎಸ್ಸೈ ಶೋಭಾ ಭರಮಣ್ಣನವರ್‌ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಇದ್ದರು.