ಸಾರಾಂಶ
ಕನಕಪುರ ತಾಲೂಕಿನ ಮಾಳಗಾಳು ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ಖಂಡಿಸಿ ಕರ್ನಾಟಕ ದಲಿತ ವಿಮೋಚನಾ ಸಮಿತಿಯಿಂದ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಶಿಗ್ಗಾಂವಿ: ಕನಕಪುರ ತಾಲೂಕಿನ ಮಾಳಗಾಳು ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ಖಂಡಿಸಿ ಕರ್ನಾಟಕ ದಲಿತ ವಿಮೋಚನಾ ಸಮಿತಿಯಿಂದ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮೆರವಣಿಗೆಯ ಮೂಲಕ ಬಂದು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಹಾಗೂ ಉಪ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಆರೋಪಿಗಳನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಯಿತು.ಕನಕಪುರ ತಾಲೂಕಿನ ಮಾಳಗಾಳು ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ನಡೆಸಲಾಗಿದೆ. ಗ್ರಾಮದ ದಲಿತ ಕೇರಿಗೆ (ಎನ್.ಕೆ. ಕಾಲನಿ) ಹೋಗಿ ವೃದ್ಧೆಯರು, ಮಹಿಳೆಯರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ದಲಿತ ವ್ಯಕ್ತಿಯ ಕೈ ಕತ್ತರಿಸಲಾಗಿದೆ. ಇಷ್ಟೆಲ್ಲ ನಡೆದರೂ ಉಪ ಮುಖ್ಯಮಂತ್ರಿ ಸೌಜನ್ಯಕ್ಕೂ ಸಾಂತ್ವನ ಹೇಳಲಿಲ್ಲ ಎನ್ನವುದು ದಲಿತರಿಗೆ ನೋವು ಉಂಟು ಮಾಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹಲ್ಲೆ ಮಾಡಿದ ಒಕ್ಕಲಿಗ ಸಮುದಾಯದ ಹರ್ಷ, ಕರುಣೇಶ, ರಾಹುಲ್, ಶಿವಾ ಶಶಾಂಕ, ಸುಬ್ಬ ದರ್ಶನ, ಹರ್ಷಾ ಮತ್ತು ಅವರ ಬೆಂಬಲಿಗರನ್ನು ತನಿಖೆಗೆ ಒಳಪಡಿಸಬೇಕು. ಜಿಲ್ಲಾ ಹಾಗೂ ತಾಲೂಕು ಆಡಳಿತ ತಕ್ಷಣ ಇವರ ಮೇಲೆ ಗೂಂಡಾ ಕಾನೂನು ಹಾಕುವ ಜತೆಗೆ ಅವರನ್ನು ಗಡಿಪಾರು ಮಾಡಬೇಕು ಎಂದು ಕರ್ನಾಟಕ ದಲಿತ ವಿಮೋಚನ ಸಮಿತಿ ಶಿಗ್ಗಾಂವಿ ಘಟಕ ಆಗ್ರಹಿಸಿದೆ.ಕರ್ನಾಟಕ ದಲಿತ ವಿಮೋಚನಾ ಸಮಿತಿಯು ಶಿಗ್ಗಾಂವಿ ತಾಲೂಕು ಅಧ್ಯಕ್ಷ ಮಂಜುನಾಥ ಎಂ. ಬಾಲಪ್ಪನವರ, ಫಕ್ಕೀರಪ್ಪ ಹರಿಜನ, ಸಂತೋಷ ಮಾದರ, ದೇವರಾಜ ಹರಿಜನ, ನಾಗರಾಜ ಮಾದರ, ಅವಿನಾಶ ಬಾಲಪ್ಪನವರ, ಗುರುರಾಜ ಮಾದರ, ಅರುಣ ನಡುಚಿನಮನಿ, ಮೈಲಾರಿ ಮೂರ್ಮನಿ, ನಾಗರಾಜ ಹರಿಜನ, ಸಂಜು ಮಾದರ, ಯಲ್ಲಪ್ಪ ಹರಿಜನ ಹಾಗೂ ಹಲವರು ಪ್ರತಿಭಟನೆಯಲ್ಲಿ ಇದ್ದರು.