ಮಂಡ್ಯ ಹಾಸ್ಟೆಲ್ ಮೇಲೆ ದಾಳಿ ಖಂಡಿಸಿ ಧರಣಿ

| Published : Feb 01 2024, 02:02 AM IST

ಸಾರಾಂಶ

ಚಿತದುರ್ಗದಲ್ಲಿ ಶೋಷಿತ ಸಮುದಾಯ ಗಳ ಸಮಾವೇಶ ಯಶಸ್ವಿಯಾಗಿದ್ದನ್ನು ಸಹಿಸದೇ, ಅಸೂಯೆಯಿಂದ ಮಂಡ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೇ ಗುರಿಯಾಗಿಟ್ಟುಕೊಂಡು, ಇಂತಹ ವಿವಾದ ಹುಟ್ಟುಹಾಕಲಾಗುತ್ತಿದೆ ಎಂದು ಕುರುಬ ಮುಖಂಡರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಂಡ್ಯದಲ್ಲಿ ಕುರುಬರ ವಿದ್ಯಾರ್ಥಿ ನಿಲಯದ ಮೇಲೆ ಕಲ್ಲು ತೂರಾಟ ನಡೆಸಿದ್ದನ್ನು ಖಂಡಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘ, ಜಿಲ್ಲಾ ಕುರುಬರ ಸಂಘ ಹಾಗೂ ಸಮಾಜದ ವಿವಿಧ ಸಂಘ-ಸಂಸ್ಥೆ, ಸಂಘಟನೆಗಳಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾಜದ ಮುಖಂಡರ ನೇತೃತ್ವದಲ್ಲಿ ಪ್ರತಿಭಟಿಸಿದ ಕುರುಬ ಸಮಾಜದ ಬಾಂಧವರು ಅಪರ ಜಿಲ್ಲಾಧಿಕಾರಿ ಪಿ.ಎನ್‌. ಲೋಕೇಶ್‌ರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಪತ್ರವನ್ನು ಅರ್ಪಿಸಿದರು.

ಇದೇ ವೇಳೆ ಮಾತನಾಡಿದ ಸಮಾಜದ ಮುಖಂಡರು, ಮಂಡ್ಯ ಜಿಲ್ಲೆ ಕೆರಗೋಡು ಗ್ರಾಮದ ಹನುಮ ಧ್ವಜ ತೆರವು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ವೇಳೆಯೇ ಮಂಡ್ಯದ ಬಿ.ಎಂ.ರಸ್ತೆಯ ಜಿಲ್ಲಾ ಕುರುಬರ ಸಂಘದ ವಿದ್ಯಾರ್ಥಿ ನಿಲಯದ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿ, ಕಟ್ಟಡದ ಕಿಟಕಿಗಳ ಗಾಜುಗಳನ್ನು ಧ್ವಂಸಗೊಳಿಸಿದ್ದಾರೆ. ಇಂತಹ ದುಷ್ಕೃತ್ಯ ಎಸಗಿದ ದುಷ್ಕರ್ಮಿಗಳು ಯಾರೇ ಆಗಿದ್ದರೂ ಸರ್ಕಾರ ಅಂತಹವ ರನ್ನು ಪತ್ತೆ ಮಾಡಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದರು.

ಕುರುಬರ ಹಾಸ್ಟೆಲ್ ಮೇಲಿದ್ದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ, ದಾಸ ಶ್ರೇಷ್ಠ ಶ್ರೀ ಕನಕದಾಸರ ಭಾವಚಿತ್ರಕ್ಕೂ ಕಿಡಿಗೇಡಿಗಳು ಅವಮಾನಿಸಿದ್ದಾರೆ. ಸ್ಥಳದಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚುವ ಮೂಲಕ ವಿವಾದವನ್ನು ರಾಜಕೀಯ ದುರುದ್ದೇಶಕ್ಕೆ ಬಳಸಲು ಪ್ರಯತ್ನಿಸಿದ್ದಾರೆ. ಇಂತಹ ಕೃತ್ಯಗಳಿಂದ ಯುವಕರನ್ನು ದಾರಿ ತಪ್ಪಿ ಸುವ ಕೆಲಸ ಮೊದಲು ನಿಲ್ಲಬೇಕು. ಈ ಕೃತ್ಯಕ್ಕೆ ಪ್ರಚೋದನೆ ನೀಡಿದ ಮತ್ತು ಕೃತ್ಯ ಎಸಗಿದ ಸಮಾಜ ಘಾತುಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ತಾಕೀತು ಮಾಡಿದರು.

ಚಿತದುರ್ಗದಲ್ಲಿ ಶೋಷಿತ ಸಮುದಾಯಗಳ ಸಮಾವೇಶ ಯಶಸ್ವಿಯಾಗಿದ್ದನ್ನು ಸಹಿಸದೇ, ಅಸೂಯೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೇ ಗುರಿಯಾಗಿ ಟ್ಟುಕೊಂಡು, ಇಂತಹ ವಿವಾದ ಹುಟ್ಟು ಹಾಕಲಾಗುತ್ತಿದೆ. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ಮುಖಂಡರು ಹಿಂದು ಧರ್ಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣ, ಕನಕ ದಾಸರು, ಕುರುಬರು ಸಹ ಹಿಂದುಗಳೇ ಎಂಬುದನ್ನು ಕಲ್ಲು ತೂರಿ, ಕುರುಬರ ಹಾಸ್ಟೆಲ್‌ನಲ್ಲಿ ದುಷ್ಕೃತ್ಯ ಎಸಗಿದ ದುಷ್ಕರ್ಮಿಗಳು ಅರ್ಥ ಮಾಡಿಕೊಳ್ಳಲಿ ಎಂದು ಅವರು ಹೇಳಿದರು.

ಕುರುಬ ಸಮಾಜದ ಮುಖಂಡರಾದ ನಿವೃತ್ತ ಉಪ ನೋಂದಣಾಧಿಕಾರಿ, ಮಲ್ಲಿಕಾರ್ಜುನಪ್ಪ, ಎಸ್.ಎಸ್.ಗಿರೀಶ, ವಿರುಪಾಕ್ಷಪ್ಪ, ಕೆ.ರೇವಣಸಿದ್ದಪ್ಪ, ಮಾಜಿ ಮೇಯರ್ ಹೆಚ್.ಬಿ.ಗೋಣೆಪ್ಪ, ಪರಶುರಾಮ, ಬಿ.ದಿಳ್ಳೆಪ್ಪ, ಪ್ರೊ.ಬಿ.ಯಲ್ಲಪ್ಪ, ಮಳಲಕೆರೆ ಪ್ರಕಾಶ, ಸುನಂದಮ್ಮ, ಜಡಗನಹಳ್ಳಿ ಚಿಕ್ಕಣ್ಣ, ಎಚ್.ಜಿ.ಸಂಗಪ್ಪ ಪೈಲ್ವಾನ್‌, ಜೆ.ಕೆ.ಕೊಟ್ರಬಸಪ್ಪ, ನಿಟುವಳ್ಳಿ ಪ್ರವೀಣ, ದೀಪಕ್‌, ಶ್ರೀನಿವಾಸ, ಆನಂದ, ಎಂ.ಮನು ದೇವನಗರಿ, ಪುರಂದರ ಲೋಕಿಕೆರೆ, ಅನಂತಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.