ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ದಲ್ಲಾಳಿಯೊಬ್ಬರ ಹುಟ್ಟುಹಬ್ಬ ಆಚರಣೆಗೆ ಅವಕಾಶ ಕೊಟ್ಟ ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಲೆನಾಡು ರಕ್ಷಣಾ ವೇದಿಕೆವತಿಯಿಂದ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.ಕಚೇರಿಯಲ್ಲಿ ದಲ್ಲಾಳಿಯೊಬ್ಬರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಕಚೇರಿಯನ್ನು ದಲ್ಲಾಳಿಗಳ ಮಯ ಮಾಡಲಾಗಿದೆ. ಇದರಿಂದಾಗಿ ಸಾರ್ವಜನಿಕರು ನೇರವಾಗಿ ಕಚೇರಿ ಕೆಲಸಕ್ಕೆ ಆಗಮಿಸದಂತೆ ಅಧಿಕಾರಿಗಳು ಪರೋಕ್ಷವಾಗಿ ಸೂಚಿಸಿದ್ದಾರೆ. ಈ ಕಾನೂನು ಬಾಹಿರ ಕೃತ್ಯ ಎಸೆಗಿರುವ ಸಾರಿಗೆ ಅಧಿಕಾರಿ, ಬ್ರೇಕ್ ಇನ್ಸಪೆಕ್ಟರ್ ಹಾಗೂ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೃತ್ಯ ನಡೆದ ಮರುದಿನವೇ ಸಂಘಟನೆಯಿಂದ ಮನವಿ ಮಾಡಲಾಗಿತ್ತು. ಆದರೆ ೮ ದಿನಗಳು ಕಳೆದರೂ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಇಡೀ ಜಿಲ್ಲಾಡಳಿತ ಭ್ರಷ್ಟಚಾರಕ್ಕೆ ಮಣೆ ಹಾಕುತ್ತಿರುವ ಅಧಿಕಾರಿಗಳ ಪರವಾಗಿರುವುದು ದೃಢವಾಗುತ್ತಿದೆ. ಆದ್ದರಿಂದ ಇನ್ನೆರಡು ದಿನಗಳಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸಾರಿಗೆ ಕಚೇರಿಗೆ ಹೊಂದಿಕೊಂಡಿರುವ ಬ್ರೋಕರ್ ಅಂಗಡಿಗಳನ್ನು ಅನತಿ ದೂರಕ್ಕೆ ವರ್ಗಾಯಿಸಬೇಕು ತಪ್ಪಿದಲ್ಲಿ ಸಾರಿಗೆ ಮಂತ್ರಿ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ ಮನವಿಯನ್ನು ಉಪವಿಭಾಗಾಧಿಕಾರಿ ಕಚೇರಿ ಸಿಬ್ಬಂದಿಗೆ ನೀಡಲಾಯಿತು.
ಸಾರಿಗೆ ಕಚೇರಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿ ಹಳೇ ಬಸ್ ನಿಲ್ದಾಣದ ಎದುರು ಮಾನವ ಸರಪಳಿ ರಚಿಸಿ ಪ್ರತಿಭಟಿಸಲಾಯಿತು. ಈ ವೇಳೆ ರಕ್ಷಣಾ ವೇದಿಕೆ ಅಧ್ಯಕ್ಷ ಸಾಗರ್ ಜಾನೇಕೆರೆ, ಮಂಜುದೇವ್, ಗೋಕುಲ್ ಸೇರಿದಂತೆ ಹಲವರಿದ್ದರು.