ಸಾರಾಂಶ
ದಾವಣಗೆರೆ: ಪಂಜಾಬ್‌ನ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ರಾಷ್ಟ್ರೀಯ ಸಂಚಾಲಕ, ರೈತ ಹೋರಾಟಗಾರ ಜಗಜಿತ್ ಸಿಂಗ್ ದಲೈವಾಲಾ 45 ದಿನದ ಉಪವಾಸ ಸತ್ಯಾಗ್ರಹದ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿರುವ ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ರಾಜ್ಯಾದ್ಯಂತ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಜ.13 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿಕುಮಾರ ತಿಳಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಲೈವಾಲಾ 45 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ನಿರ್ಲಕ್ಷ್ಯ ವಹಿಸಿರುವ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ರಾಜ್ಯಾದ್ಯಂತ ರೈತ ಸಂಘಟನೆಗಳು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೃಷಿ ಮಂತ್ರಿಗಳ ಪ್ರತಿಕೃತಿ ದಹನ ಚಳುವಳಿ ನಡೆಸಲಾಗುವುದು ಎಂದರು. ಕೇಂದ್ರ ಸರ್ಕಾರ ಕೂಡಲೇ ಮಾತುಕತೆ ನಡೆಸಿ ದಲೈವಾಲಾ ಪ್ರಾಣ ಉಳಿಸಬೇಕು. ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಗ್ಯಾರಂಟಿ ಕಾನೂನು ಜಾರಿ ತರಬೇಕು ಎಂದು ಒತ್ತಾಯಿಸಲು ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ದಾವಣಗೆರೆಯಲ್ಲಿ ಜ.12 ರಂದು ಮಧ್ಯಾಹ್ನ 12.30ಕ್ಕೆ ಇಲ್ಲಿನ ಜಯದೇವ ವೃತ್ತದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿ, ಪ್ರಧಾನಮಂತ್ರಿ ಮತ್ತು ಕೃಷಿ ಮಂತ್ರಿಗಳ ಪ್ರತಿಕೃತಿ ದಹಿಸಲಾಗುವುದು ಎಂದು ತಿಳಿಸಿದರು. ದೇಶದ ರೈತರ ಶಕ್ತಿ ತೋರಿಸಬೇಕು. ದೇಶದ ರೈತರ ಒಳಿತಿಗಾಗಿ ಉಪವಾಸ ಸತ್ಯಾಗ್ರಹದ ಮೂಲಕ ತಮ್ಮ ಪ್ರಾಣ ತ್ಯಾಗ ಮಾಡುತ್ತಿರುವ ದಲೈವಾಲಾ ಬೆಂಬಲಕ್ಕೆ ರೈತರಾದ ನಾವೆಲ್ಲ ನಿಲ್ಲಬೇಕು ಎಂದು ರೈತರಲ್ಲಿ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಪೂಜಾರ ಆಂಜಿನಪ್ಪ, ಅಶೋಕ್, ತಿರುಮಲೇಶ, ದಶರಥ ರಾಜ್, ಪ್ರತಾಪ ಮಾಯಕೊಂಡ, ನಾಗರಕಟ್ಟೆ ಜಯನಾಯ್ಕ, ರಾಂಪುರದ ಆರ್.ಜಿ.ಬಸವರಾಜ, ಸೋಮಣ್ಣ, ಗುರುಮೂರ್ತಿ ಮತ್ತಿತರರಿದ್ದರು.