ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ಹಾಸ್ಟೆಲ್ ಪ್ರವೇಶ ಅರ್ಜಿ ಆಹ್ವಾನ ವಿಳಂಬ ವಿರೋಧಿಸಿ, ಕೂಡಲೇ ಅರ್ಜಿ ಆಹ್ವಾನಿಸಿ, ಆಯ್ಕೆ ಪಟ್ಟಿ ಬಿಡುಗಡೆ ಮಾಡಬೇಕೆಂದು ಹಾಗೂ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್‌ಗಳನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿ ಎಸ್‌ಎಫ್‌ಐ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿನಿಯರು ಸೋಮವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ಸ್ಥಳೀಯ ಇಜಾರಿ ಲಕಮಾಪುರದ ನೇತಾಜಿ ಬಸ್ ನಿಲ್ದಾಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಿ.ಬಿ. ರಸ್ತೆ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಈ ವರೆಗೂ ಹಾಸ್ಟೆಲ್ ಅರ್ಜಿ ಆಹ್ವಾನಿಸದಿರುವುದು ರಾಜ್ಯ ಸರ್ಕಾರದ ಮಹಾ ದ್ರೋಹವನ್ನು ತೀವ್ರವಾಗಿ ಖಂಡಿಸುತ್ತೇವೆ. ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡುವುದನ್ನು ಕೈ ಬಿಡಬೇಕು, ಹಾಸ್ಟೆಲ್ ಅರ್ಜಿ ಹಾಕಿದ ಎಲ್ಲರಿಗೂ ವಸತಿ ಸೌಲಭ್ಯವನ್ನು ಸರ್ಕಾರಗಳು ಒದಗಿಸಬೇಕು. ಬಸ್ಸಿನ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂದು ಒತ್ತಾಯಿಸಿದರು.ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್. ಮಾತನಾಡಿ, ೨೦೨೪-೨೫ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ತಿಂಗಳು ಕಳೆಯುತ್ತ ಬಂದರೂ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳ ಮೂಲಕ ನಡೆಯುತ್ತಿರುವ ಮೆಟ್ರಿಕ್ ಪೂರ್ವ ಬಾಲಕ-ಬಾಲಕಿಯರ ವಸತಿ ನಿಲಯಗಳಲ್ಲಿ ಸಾವಿರಾರು ಸೀಟುಗಳು ಖಾಲಿ ಇದ್ದರೂ ಕರೆಯದೆ ನಿರ್ಲಕ್ಷ್ಯ ತೋರಿದ್ದಾರೆ. ಈ ವರೆಗೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶ ಅರ್ಜಿ ಆಹ್ವಾನಿಸುವಲ್ಲಿ ಸರ್ಕಾರ ಮತ್ತು ಇಲಾಖೆಗಳು ವಿಫಲವಾಗಿದ್ದು, ಈ ವಿಳಂಬ ನೀತಿಯನ್ನು ಎಸ್‌ಎಫ್‌ಐ ಹಾವೇರಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು.
ಕಳೆದ ವರ್ಷ ಮೆಟ್ರಿಕ್ ಪೂರ್ವ ವಸತಿ ನಿಲಯಗಳಿಗೆ ಮೇ ತಿಂಗಳಲ್ಲಿ ಅರ್ಜಿ ಆಹ್ವಾನ ಮಾಡಿ ಜೂನ್ ತಿಂಗಳ ೧೦ರ ಒಳಗಡೆ ಅರ್ಜಿ ತೆಗೆದುಕೊಂಡು ಅರ್ಜಿ ಪ್ರಕ್ರಿಯೆ ಮುಗಿಸಿದ್ದರು. ಆದರೆ, ಈ ಶೈಕ್ಷಣಿಕ ವರ್ಷ ಜೂ. ೧೮ ಮುಗಿದರೂ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಹೊಸ ಪ್ರವೇಶಕ್ಕೆ ಅರ್ಜಿ ಕರೆಯದು ನಿರ್ಲಕ್ಷ್ಯ ಮಾಡುತ್ತಿರುವುದನ್ನು ಗಮನಿಸಿದರೆ ಸರ್ಕಾರ ಗ್ರಾಮೀಣ ಪ್ರದೇಶದ ಬಡ, ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಆದ್ಯತೆ ನೀಡದೆ ಇರವುದನ್ನು ಎಸ್‌ಎಫ್‌ಐ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರ ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ. ಸಚಿವರು ಈ ಕೂಡಲೇ ಗಮನ ಹರಿಸಬೇಕು. ಇಲ್ಲದಿದ್ದಲ್ಲಿ ರಾಜ್ಯಾದಂತ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದರು.ವಿದ್ಯಾರ್ಥಿನಿ ಅಕ್ಷತಾ ಬಮ್ಮಣ್ಣನವರ ಮಾತನಾಡಿದರು. ವಿದ್ಯಾರ್ಥಿನಿ ಗಿರಿಜಾ ಕಡೆಕೊಪ್ಪ ಮನವಿ ಪತ್ರ ಓದಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡರಾದ ಅರುಣ್ ಆರೇರ್, ಸುಲೇಮಾನ್ ಮತ್ತಿಹಳ್ಳಿ, ಶ್ರೀನಿವಾಸ ವಡ್ತೇರ್, ರಾಜು ವಿ., ಯಶವಂತ ಲಮಾಣಿ, ನಾಗರಾಜ ಎಲ್., ಹೇಮಂತ್ ಲಮಾಣಿ, ಪವಿತ್ರಾ, ಕಾವ್ಯ, ಸೌಮ್ಯಾ ಕಲ್ಲನಗೌಡ್ರು, ಪ್ರಿಯಾಂಕಾ ಹಿರೇಮಠ, ಸಲ್ಮಾ ಜಾತಗೇರ್, ಪೂಜಾ ಎಂ.ಬಿ., ನೇತ್ರಾ ಬೂದನೂರ, ಲಕ್ಷ್ಮೀ ಕುಂಬಾರ ಇತರರು ಇದ್ದರು.