ಅಂಬೇಡ್ಕರ್ ಪ್ರತಿಮೆ, ಭಾವಚಿತ್ರಕ್ಕೆ ಅಪಮಾನ ಖಂಡಿಸಿ ಪ್ರತಿಭಟನೆ

| Published : Apr 30 2025, 12:33 AM IST

ಸಾರಾಂಶ

ವಾಜಮಂಗಲದಲ್ಲಿ ಅಂಬೇಡ್ಕರ್ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ಅಪಮಾನ ಮಾಡಿರುವುದು ನೋವಿನ ಸಂಗತಿ. ಪ್ರಕರಣ ನಡೆದು ನಾಲ್ಕು ದಿನ ಕಳೆದರೂ ಕೂಡ ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಸರ್ಕಾರ ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ಒಳಪಡಿಸಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮೈಸೂರಿನ ವಾಜಮಂಗಲದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ಅಪಮಾನ ಮಾಡಿರುವುದನ್ನು ಖಂಡಿಸಿ, ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ದಲಿತಪರ ಹಾಗೂ ಜನಪರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ ಸಂವಿಧಾನದ ವಿರೋಧಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಲೊಕೇಶ್ ಅವರಿಗೆ ಮನವಿ ಸಲ್ಲಿಸಿದರು.

ತಾಪಂ ಮಾಜಿ ಉಪಾಧ್ಯಕ್ಷ ಮಾರ್ಕಾಲು ಸಿ.ಮಾಧು ಮಾತನಾಡಿ, ವಾಜಮಂಗಲದಲ್ಲಿ ಅಂಬೇಡ್ಕರ್ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ಅಪಮಾನ ಮಾಡಿರುವುದು ನೋವಿನ ಸಂಗತಿ. ಪ್ರಕರಣ ನಡೆದು ನಾಲ್ಕು ದಿನ ಕಳೆದರೂ ಕೂಡ ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಸರ್ಕಾರ ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಪುರಸಭೆ ಸದಸ್ಯ ವಡ್ಡರಹಳ್ಳಿ ಸಿದ್ದರಾಜು ಮಾತನಾಡಿ, ಪ್ರಪಂಚದಲ್ಲಿಯೇ ಉತ್ತಮ ಸಂವಿಧಾನ ತಂದುಕೊಟ್ಟು ಪ್ರತಿಯೊಬ್ಬರು ನೆಮ್ಮದಿಯಿಂದ ಬದುಕಲು ಡಾ.ಬಿ.ಆರ್.ಅಂಬೇಡ್ಕರ್ ಬರೆದಿರುವ ಸಂವಿಧಾನ ಕಾರಣ. ಆಧುನಿಕ ಯುಗದಲ್ಲಿಯೂ ಕೂಡ ಬಾಬಾ ಸಾಹೇಬರಿಗೆ ಅಪಮಾನ ಮಾಡುತ್ತಿರುವುದು ತೀವ್ರ ಖಂಡನೀಯ. ಗ್ರಾಮಗಳಲ್ಲಿ ಅಶಾಂತಿ ತಲೆದೋರುವ ಮುನ್ನ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್ ಲೊಕೇಶ್, ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳು ಮುಖಂಡರು ಸಲ್ಲಿಸಿದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ನಂಜುಂಡಸ್ವಾಮಿ, ಕಾಂತರಾಜು, ಯತೀಶ್, ಚೇತನ್‌ಕುಮಾರ್, ಶ್ರೀನಿವಾಸ್, ಸುರೇಶ್, ನಟರಾಜು, ಮಲ್ಲೇಶ್, ಪ್ರಸಾದ್, ಪ್ರಸನ್ನ, ಶಿವಕುಮಾರ್, ಮಹೇಶ್, ರಾಜಶೇಖರ್, ಮಧುಕುಮಾರ್, ಚಿಕ್ಕಣ್ಣ, ನಾಗರಾಜು ಸೇರಿದಂತೆ ಇತರರು ಇದ್ದರು.