ಅರೆಬರೆ ರಾಜ ಕಾಲುವೆ ಹೂಳೆತ್ತುವ ಕಾಮಗಾರಿ ವಿರೋಧಿಸಿ ಪ್ರತಿಭಟನೆ

| Published : May 16 2024, 12:51 AM IST

ಅರೆಬರೆ ರಾಜ ಕಾಲುವೆ ಹೂಳೆತ್ತುವ ಕಾಮಗಾರಿ ವಿರೋಧಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹೂಳು ತೆಗೆಯುವ ಸಲುವಾಗಿ ಹಳ್ಳಕ್ಕೆ ಮಣ್ಣು ತುಂಬಿ ಯಂತ್ರ ಇಳಿಸಿದ್ದು, ನಂತರ ಕೆಲಸ ನಿಲ್ಲಿಸಿ ನಾಪತ್ತೆಯಾಗಿದ್ದಾರೆ ಎಂದು ಜನರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಗೋಕರ್ಣ: ಇಲ್ಲಿನ ಸಂಗಮ ನಾಲಾ ಸೇರುವ ಮಲ್ಲನ್ ಓಣಿ ಹಳ್ಳದ(ರಾಜ ಕಾಲುವೆ) ಹೂಳೆತ್ತುವ ಕಾಮಗಾರಿ ಅರ್ಧಕ್ಕೆ ಬಿಟ್ಟಿರುವುದನ್ನು ವಿರೋಧಿಸಿ ಸಾರ್ವಜನಿಕರು ಬುಧವಾರ ಮೀನು ಮಾರುಕಟ್ಟೆ ಮುಖ್ಯರಸ್ತೆ ಬಳಿ ಪ್ರತಿಭಟನೆ ನಡೆಸಿದರು.

ಹೂಳು ತೆಗೆಯುವ ಸಲುವಾಗಿ ಹಳ್ಳಕ್ಕೆ ಮಣ್ಣು ತುಂಬಿ ಯಂತ್ರ ಇಳಿಸಿದ್ದು, ನಂತರ ಕೆಲಸ ನಿಲ್ಲಿಸಿ ನಾಪತ್ತೆಯಾಗಿದ್ದಾರೆ ಎಂದು ಜನರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಮಳೆ ಬಂದರೆ ನೀರು ಹರಿಯದೆ ನಿಲ್ಲುತ್ತದೆ. ಇದರಿಂದ ಐದು ನೂರಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗುತ್ತದೆ. ಕೃಷಿ ಭೂಮಿ ನಾಶವಾಗುತ್ತದೆ. ಹೀಗಿರುವಾಗ ಕೆಲಸವನ್ನು ಏಕೆ ತ್ವರಿತವಾಗಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಇದು ಚಿಕ್ಕನೀರಾವರಿ ಇಲಾಖೆಗೆ ಸಂಬಂಧಿಸಿದ್ದಾಗಿದ್ದು, ಅವರ ಸ್ಥಳಕ್ಕೆ ಬರುತ್ತಾರೆ ಎಂದಾಗ ಜನರ ಮತ್ತಷ್ಟು ಆಕ್ರೋಶಭರಿತರಾದರು. ಪಂಚಾಯಿತಿಯವರು ಇಲ್ಲಿ ಸಮಸ್ಯೆಯ ಬಗ್ಗೆ ಸರಿಯಾದ ಮಾಹಿತಿಯನ್ನು ಇಲಾಖೆಯವರಿಗೆ ನೀಡಬೇಕು ಎಂದು ಆಗ್ರಹಿಸಿದರು.

ಅಂತೂ ಸ್ಥಳಕ್ಕೆ ಚಿಕ್ಕ ನೀರಾವರಿ ಇಲಾಖೆ ಎಂಜಿನಿಯರ್‌ ಅಮಿತಾ ತಳೇಕರ ಆಗಮಿಸಿದರು. ಆಗ ಸಾರ್ವಜನಿಕರು ಮಾತನಾಡಿ, ಮಳೆಗಾಲ ಹತ್ತಿರ ಬರುತ್ತಿದ್ದಂತೆ ಕಾಮಗಾರಿ ಪ್ರಾರಂಭಿಸಿದ್ದಿರಿ. ಆದರೆ ಹಲವು ದಿನಗಳಿಂದ ಕಾಮಗಾರಿ ಬಂದ್‌ ಮಾಡಿದ್ದು, ಮಳೆ ಬಂದರೆ ನಮ್ಮ ತೊಂದರೆ ಕೇಳುವವರು ಯಾರು ಎಂದು ಪ್ರಶ್ನಿಸಿ ತೀವ್ರ ತರಾಟೆಗೆ ತೆಗೆದುಕೊಂಡರು.

ನಂತರ ಮಾತನಾಡಿದ ಎಂಜಿನಿಯರ್‌, ಯಂತ್ರ ಇಳಿಸಿದಾಗ ಹೂಳಿನಲ್ಲಿ ಹೂತು ಹೋಗುತ್ತಿದೆ. ಆದ ಕಾರಣ ವಿಳಂವಾಗಿದೆ ಎಂದಾಗ, ಮಣ್ಣು ರಾಶಿ ಹಾಕಿ ಬಿಟ್ಟಿದ್ದೇಕೆ ಎಂದಾಗ, ಇದನ್ನು ತೆಗೆದು ಸ್ವಚ್ಛಗೊಳಿಸಿ ಕೆಲಸ ಮುಂದಿನ ವರ್ಷ ಪ್ರಾರಂಭಿಸುತ್ತೇವೆ ಎಂದಾಗ, ಬೇಡ. ಹಣ ವಾಪಸ್‌ ಹೋಗುತ್ತದೆ. ಹೆಚ್ಚಿನ ಯಂತ್ರ, ಕೆಲಸಗಾರರನ್ನು ಕರೆಯಿಸಿ ತ್ವರಿತವಾಗಿ ಹೂಳು ಎತ್ತಿ ಎಂದು ಪಟ್ಟು ಹಿಡಿದರು.

ನಂತರ ಗುರುವಾರದಿಂದಲೇ ಕೆಲಸ ಪ್ರಾರಂಭಿಸುತ್ತೇವೆ ಎಂದು ಭರವಸೆ ನೀಡಿದ ಬಳಿಕ ವಾತಾವರಣ ತಿಳಿಗೊಂಡಿತು. ಅಲ್ಲದೇ ಕೆಲಸವನ್ನು ಸಮರ್ಪಕವಾಗಿ ಮಾಡುವಂತೆ ಹಾಗೂ ಉಳಿದ ಕಡೆ ಮುಂದೆ ಹೂಳೆತ್ತುವ ಕಾರ್ಯವನ್ನು ಮಾರ್ಚ್‌ ತಿಂಗಳಿಂದ ಪ್ರಾರಂಭಿಸುವಂತೆ ಜನರು ಆಗ್ರಹಿಸಿದರು.

ಗ್ರಾಪಂ ಅಧ್ಯಕ್ಷೆ ಸುಮನಾ ಗೌಡ, ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಮಂಜುನಾಥ ಜನ್ನು, ಗ್ರಾಪಂ ಸದಸ್ಯರಾದ ಪಾರ್ವತಿ ಶೆಟ್ಟಿ, ಮಂಜು ಶೆಟ್ಟಿ, ಲಕ್ಷ್ಮೀಶ ಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿನಯಕುಮಾರ, ಸ್ಥಳೀಯರಾದ ಗಣಪತಿ ಗೌಡ, ಕುಮಾರ ದಿವಟಗಿ, ಮಾಣೇಶ್ವರ ಗೌಡ ತಾರಮಕ್ಕಿ, ಗಣಪತಿ ನಾಗಪ್ಪ ಗೌಡ, ನಾಗೇಂದ್ರ ಶೇಟ್, ದರ್ಶನ್, ಮಹೇಶ ಗೌಡ, ವಿನಾಯಕ ಅಂಬಿಗ, ಚಂದು ಅಂಬಿಗ ಮತ್ತಿತರರು ಉಪಸ್ಥಿತರಿದ್ದರು. ಪಿಐ ಯೋಗೇಶ ಕೆ.ಎಂ., ಪಿಎಸ್ಐಗಳಾದ ಖಾದರ ಬಾಷಾ, ಶಶಿಧರ ಹಾಗೂ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್‌ ಕಲ್ಪಿಸಿದ್ದರು.ಯಾವ, ಯೋಜನೆ, ತೊಂದರೆ ಏನು?

ಐದು ಕಿಮೀ ಹೆಚ್ಚು ದೂರದಿಂದ ಮಳೆಯ ನೀರು ವಿವಿಧ ಹಳ್ಳದ ಮೂಲಕ ಒಟ್ಟಾಗಿ ಮಲ್ಲನ ಮನೆ ಓಣಿಯಿಂದ ಸಮುದ್ರ ಸೇರುವ ಸಂಗಮ ನಾಲಕ್ಕೆ ಕೂಡುತ್ತದೆ.

ಈ ನಾಲಾ ಹೂಳೆತ್ತಿ ಸ್ವಚ್ಛಗೊಳಿಸುವಂತೆ ಹಲವಾರು ವರ್ಷಗಳಿಂದ ಜನರು ಆಗ್ರಹಿಸುತ್ತಿದ್ದರು. ಅದರಂತೆ ಕಳೆದ ವರ್ಷ ಚಿಕ್ಕ ನಿರಾವರಿ ಇಲಾಖೆಯಿಂದ ₹90 ಲಕ್ಷ ವೆಚ್ಚದಲ್ಲಿ 600 ಮೀಟರ್ ಹೂಳು ತೆಗೆಯುವ ಯೋಜನೆ ಮಂಜೂರಿಯಾಗಿತ್ತು. ಆದರೆ ಮಳೆ ಪ್ರಾರಂಭವಾದರಿಂದ ಕೆಲಸ ನಿಂತಿತ್ತು. 15 ದಿನಗಳ ಹಿಂದೆ ಈ ಈ ವರ್ಷ ಕೆಲಸ ಆರಂಭಿಸಲಾಗಿತ್ತು. ಹೂಳು ತೆಗೆಯುವ ಸಲುವಾಗಿ ಜೆಸಿಬಿ ಹಳ್ಳದಲ್ಲಿ ಇಳಿಸಲು ಮಣ್ಣಿನ ರಾಶಿ ಹಾಕಿ ಹಲವು ದಿನಗಳಿಂದ ಹಾಗೇ ಬಿಡಲಾಗಿತ್ತು. ಈ ಹಳ್ಳದ ಸುತ್ತಮುತ್ತಲಿನ ತಗ್ಗು ಪ್ರದೇಶದ ಮನೆಗಳಿಗೆ ಮಳೆ ಬಂದರೆ ನೀರು ತುಂಬವ ಆತಂಕ ಎದುರಾಗಿತ್ತು. ಈ ಬಗ್ಗೆ ಪಂಚಾಯಿತಿಗೆ ತಿಳಿಸದರೂ ಯಾವುದೇ ಪ್ರಯೋಜನವಾಗದ ಕಾರಣ ಬುಧವಾರ ಪ್ರತಿಭಟನೆ ನಡೆಸಿದ್ದರು.