ಸಾರಾಂಶ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ಕಾವ್ಯ ಎಂಬುದು ಸುಂದರ ಪ್ರತಿಮೆಯ ವರ್ಣನೆಯಲ್ಲ ಬದಲಾಗಿ ಅದು ಮನಸ್ಸಿಗೆ ಮುಟ್ಟುವಂತಿರಬೇಕು ಹಾವೇರಿಯ ಸಾಹಿತಿ ಡಾ. ಪುಷ್ಪಾ ಶಲವಡಿಮಠ ಹೇಳಿದರು.ನಗರದ ಮೆಡ್ಲೇರಿ ರಸ್ತೆ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಮಂಗಳವಾರ ಸ್ಥಳೀಯ ಮಾತೋಶ್ರೀ ಮಹದೇವಕ್ಕ ಮಂಗಳವಾದ್ಯ ಸಂಗೀತ ಮತ್ತು ತರಬೇತಿ ಸಂಸ್ಥೆ ವತಿಯಿಂದ ವಿಶ್ವಗುರು ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವದ ಪ್ರಯುಕ್ತ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೋವು, ಸೋಲು ಅವಮಾನಗಳು ಕಾವ್ಯ ಹುಟ್ಟಲು ವೇದಿಕೆಯಾಗಿದೆ. ಕಾವ್ಯ ದಿಢೀರ್ ಎಂದು ಹುಟ್ಟುವುದಿಲ್ಲ. ಅದಕ್ಕೆ ಧ್ಯಾನಸ್ಥ ಸ್ಥಿತಿ ಹಾಗೂ ಜೀವನ ಅನುಭವದ ದ್ರವ್ಯ ಬೇಕು. ಸಮಾಜದ ವರ್ತಮಾನಗಳಿಗೆ ಕವಿ ಹೃದಯ ಸದಾ ತೆರೆದಿರಬೇಕು. ಕವಿ ಒಬ್ಬ ಸಮಾಜ ತಿದ್ದುವ ಶಿಕ್ಷಕನಾಗಿದ್ದು ಅವನಿಗೆ ಸಾಮಾಜಿಕ ಜವಾಬ್ದಾರಿಯಿದೆ. ಕವಿಯತ್ತ ಸಮಾಜ ಸದಾ ದೃಷ್ಟಿಯಿಟ್ಟು ನೋಡುತ್ತದೆ. ಕವಿಗೆ ನೈತಿಕತೆಯ ಹಾದಿಯ ಪಯಣ ಬೇಕು. ಕವಿ ಅಥವಾ ಬರಹಗಾರ ಆದವರು ನಾನು ಶ್ರೇಷ್ಠ, ನನ್ನದೇ ಶ್ರೇಷ್ಠ ಎಂಬ ಅಹಂಕಾರದ ಕಿರೀಟ ಧರಿಸಬಾರದು ಎಂದರು.ಕವಿಗೋಷ್ಠಿಗೆ ಚಾಲನೆ ನೀಡಿದ ಕವಿ ದೇವರಾಜ ಹುಣಸಿಕಟ್ಟಿ ಮಾತನಾಡಿ, ಕವಿಗೋಷ್ಠಿಗೆ ಚಾಲನೆ ನೀಡಿದ ಕವಿ ದೇವರಾಜ ಹುಣಸಿಕಟ್ಟಿ ಮಾತನಾಡಿ, ಶರಣ ಚಳುವಳಿ ದೇಹವನ್ನೇ ದೇಗುಲವಾಗಿಸಿ ಕಾಯಕದಲ್ಲಿ ದೇವರನ್ನು ಕಾಣುವಂತೆ ಮಾಡಿದರು. ನಾವು ಇಂದು ಅದೇ ಬಸವಣ್ಣನನ್ನು ಸ್ಥಾವರಗೊಳಿಸಿ ಪೂಜಿಸುವ ಹಂತಕ್ಕೆ ತಲುಪಿದ್ದೇವೆ. ಶರಣರು ವೈದಿಕ ಪರಂಪರೆಯ ಮೇಲು ಕೀಳು, ಸ್ಪರ್ಶ, ಅಸ್ಪರ್ಶ, ಜಾತಿ, ಮೌಢ್ಯಾಚರಣೆಗಳ ಕಬಂಧ ಬಾಹುಗಳಿಂದ ಮನುಷ್ಯ ಕುಲವ ಬಿಡಿಸುವ ಸತತ ಪ್ರಯತ್ನ ಮಾಡಿದರು. ಈ ಮೌಢ್ಯ ಆಚರಣೆಗಳು ನಮ್ಮ ಮನುಕುಲವನ್ನು ಹಾವು ಏಣಿ ಆಟದಲ್ಲಿಯ ವಿಷ ಸರ್ಪದಂತೆ ನಮ್ಮನ್ನು ಆವರಿಸಿ ಅಧಃಪತನಕ್ಕೆ ಕಾರಣವಾಗಿವೆ. ಕಾಲ ಕಾಲಕ್ಕೆ ಬುದ್ಧ, ಬಸವ, ಅಂಬೇಡ್ಕರ್ ಅಂತವರು ಏಣಿಯ ಕೆಲಸ ಮಾಡುತ್ತ, ಮನುಷ್ಯರನ್ನು ಮನುಷ್ಯರಂತೆ ಕಾಣುವ ಸಮ ಸಮಾಜದ ಕನಸು ಸಾಕಾರಗೊಳ್ಳಲು ಪ್ರಯತ್ನಪಟ್ಟರು ಎಂದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ವೀರೇಶ ಜಂಬಗಿ, ಕಸಾಪ ಮೆಡ್ಲೇರಿ ಗ್ರಾಮ ಘಟಕದ ಅಧ್ಯಕ್ಷ ಮಾರುತಿ ತಳವಾರ, ಜಿಲ್ಲಾ ಚಲವಾದಿ ಮಹಾಸಭಾದ ಅಧ್ಯಕ್ಷ ಮಲ್ಲೇಶಪ್ಪ ಮದ್ಲೇರ, ಮಾತೋಶ್ರೀಮಹದೇವಕ್ಕ ಮಂಗಳವಾದ್ಯ ಮತ್ತು ಸಂಗೀತ ತರಬೇತಿ ಸಂಸ್ಥೆ ಅಧ್ಯಕ್ಷ ಬಸವರಾಜ ಸಾವಕ್ಕನವರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ದ್ರಾಕ್ಷಾಯಿಣಿ ಉದಗಟ್ಟಿ, ಸುನೀತಾ ಹೊಸಳ್ಳಿ, ರೇಖಾ ರಾಮಾಳದ, ರಮೇಶ ಬಡಿಗೇರ, ವೆಂಕಟೇಶ ಪೂಜಾರಿ, ಅಶ್ವಿನಿ ರೆಡ್ಡಿ, ಶಿವಕುಮಾರ ಚನ್ನಪ್ಪನವರ, ನೀಲಕಂಠಯ್ಯ ಓದಿಸೋಮಠ, ಆಂಜನೇಯ ಡಿ. ಕೆ., ಸಿರಿಚಂದನ, ಶಿವಾನಂದ ಬುಳ್ಳಮ್ಮನವರ, ಬಸವರಾಜ ಪೂಜಾರ, ಶರೀಫಸಾಬ ಶರೀಪನವರ, ಪ್ರಕಾಶ ಸೊಪ್ಪಿನ, ಎಚ್.ಆರ್. ವೆಂಕಣ್ಣನವರ, ಮಂಜುನಾಥ ಬೂದನೂರ, ಲೀಲಾವತಿ ಕೂಗನೂರಮಠ, ಲಕ್ಷ್ಮೀ ಅಡಕಿ, ವಿ. ಎಂ. ಕೂಗನೂರಮಠ, ಪ್ರಭಾಕರ ಶಿಗ್ಲಿ, ಮಂಜುನಾಥ ಕೊರವರ, ಚನ್ನಬಸಪ್ಪ ನಾಡರ ಸೇರಿದಂತೆ 25 ಕವಿಗಳು ಕವಿತಾ ವಾಚನ ಮಾಡಿದರು.
ನಿವೃತ್ತ ಮುಖ್ಯ ಶಿಕ್ಷಕ ಎಚ್.ಎಚ್. ದೊಡ್ಡಮನಿ, ಬೀರಪ್ಪ ಲಮಾಣಿ, ಮಂಜುನಾಥ ಬೂದನೂರ, ಮಮತಾ ಸಾವಕ್ಕನವರ, ಡಾ. ಬಿ.ಆರ್. ಅಂಬೇಡ್ಕರ್ ಸೇವಾ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.