ಮಾ.11ಕ್ಕೆ ಅರಣ್ಯಾಧಿಕಾರಿ ವಿರುದ್ಧ ಪ್ರತಿಭಟನೆ

| Published : Feb 27 2024, 01:32 AM IST

ಸಾರಾಂಶ

ಜಿಲ್ಲಾ ಅರಣ್ಯಾಧಿಕಾರಿ ಏಡುಕೊಂಡಲು ಮತ್ತು ಅವರ ಸಹಚಾರ ಅಧಿಕಾರಿಗಳು ಸಾವಿರಾರು ಎಕರೆ ಪ್ರದೇಶದಲ್ಲಿ ಸಾವಿರಾರು ಮಾವಿನ ಮರಗಳ ಮಾರಣ ಹೋಮ ಮಾಡಿದ್ದಾರೆ, ಭೂ ಮಂಜೂರಾತಿ ಮಾಡಿದ ದಾಖಲೆ, ಸಾಗುವಳಿ ಪತ್ರ ಹಾಗೂ ಹಕ್ಕು ಪತ್ರ ಇದ್ದರೂ ಮರಗಳ ಹನನ

ಕನ್ನಡಪ್ರಭ ವಾರ್ತೆ ಕೋಲಾರ

ರೈತರ ಜಮೀನುಗಳನ್ನು ಅಕ್ರಮವಾಗಿ ದೌರ್ಜನ್ಯದಿಂದ ಸ್ವಾಧೀನಕ್ಕೆ ಪಡೆದು, ಕೋಟ್ಯತರ ರು.ಗಳ ಮೌಲ್ಯದ ಮಾವಿನ ಮರಗಳನ್ನು ನಾಶಪಡಿಸಿರುವ ಜಿಲ್ಲಾ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕ್ರಮಕೈಗೊಂಡು ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಮಾ.೧೧ರಂದು ಬೆಳಗ್ಗೆ ೧೧ ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಂತ್ರಸ್ತ ರೈತರು ಅಖಿಲ ಭಾರತ ಕಿಸಾನ್ ಮಂಚ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಸಂತ್ರಸ್ತ ರೈತರ ಸಮ್ಮೇಳನದಲ್ಲಿ ಮಾತನಾಡಿದ ಕಿಸಾನ್ ಮಂಚ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಗೋಪಾಲ್‌, ರೈತರ ಸಮ್ಮೇಳನದಲ್ಲಿ ಕೋಲಾರ ಜಿಲ್ಲೆಯ ಬರಪೀಡಿತ ಪ್ರದೇಶವಾಗಿದ್ದು ಅತಿ ಕಡಿಮೆ ನೀರು ಬಳಕೆ ಮಾಡಿ ಹಣ್ಣು ತರಕಾರಿಗಳನ್ನು ಬೆಳೆದು ಜೀವನ ನಡೆಸುತ್ತಿದ್ದಾರೆ ಎಂದರು.ಜಮೀನಿನ ಸಾಗುವಳಿ ಪತ್ರ ಇದೆ

ಜಿಲ್ಲಾ ಅರಣ್ಯಾಧಿಕಾರಿ ಏಡುಕೊಂಡಲು ಮತ್ತು ಅವರ ಸಹಚಾರ ಅಧಿಕಾರಿಗಳು ೧೩೦೦ ಎಕರೆ ಪ್ರದೇಶದಲ್ಲಿ ಸುಮಾರು ೮೦ ಸಾವಿರಕ್ಕೂ ಅಧಿಕ ಮಾವಿನ ಮರಗಳ ಮಾರಣ ಹೋಮ ಮಾಡಿದ್ದಾರೆ, ೧೯೬೦ರಲ್ಲಿ ಭೂ ಮಂಜೂರಾತಿ ಮಾಡಿರುವುದು ದಾಖಲೆಗಳಲ್ಲಿದೆ, ಸಾಗುವಳಿ ಪತ್ರ ಹಾಗೂ ಹಕ್ಕು ಪತ್ರ ನೀಡಿದ್ದಾರೆ ಎಂದರು.

ತನಿಖೆ ನಡೆಸಲು ಒತ್ತಾಯ

ಆದರೆ ಜಿಲ್ಲಾ ಅರಣ್ಯ ಇಲಾಖೆಯ ಅಧಿಕಾರಿ ಏಡುಕೊಂಡಲು ಅವರು ಸಂವಿಧಾನ ಬದ್ದ ಕಾನೂನುಗಳನ್ನು ಧಿಕ್ಕರಿಸಿ ಇವರದೇ ಆದ ಕಾನೂನು ಮಾವಿನ ಮರಗಳನ್ನು ನಾಶಪಡಿಸಿದ್ದಾರೆ. ಇವರಿಗೆ ಅರಣ್ಯ ಅಧಿಕಾರಿಯಾಗಿ ಮುಂದುವರೆಯುವಂತಹ ನೈತಿಕತೆ ಇಲ್ಲ. ಕೂಡಲೇ ಸರ್ಕಾರವು ಬೇರೆ ಜಿಲ್ಲೆಗೆ ವರ್ಗಾಯಿಸಬೇಕು ಮತ್ತು ಇವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮಜರುಗಿಸಬೇಕು ಎಂದು ಒತ್ತಾಯಿಸಿದರು. ಸಮ್ಮೇಳನದಲ್ಲಿ ವಕೀಲ ಹಾಗೂ ಹೋರಾಟಗಾರ ವಾಸುದೇವರೆಡ್ಡಿ, ವಕೀಲ ಎಂ. ಶಿವಪ್ರಕಾಶ್‌ ಇದ್ದರು.