ಗದಗ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಶನಿವಾರ ಸಮಾನತೆಗಾಗಿ ನಾವು ಸಂಘಟನೆ ಆಶ್ರಯದಲ್ಲಿ ವಚನ ಅರಿವಿನ ಮಹಾಯಾನ, ವಚನಗಳ ಸಾಮೂಹಿಕ ಪಠಣ ಹಾಗೂ ಸಂವಿಧಾನದ ಪೂರ್ವ ಪೀಠಿಕೆಯ ಸಮಾನತೆಯ ಉದ್ಘೋಷ ಕಾರ್ಯಕ್ರಮ ನಡೆಯಿತು.
ಗದಗ: ನಗರದಲ್ಲಿ ನಡೆಯಲಿರುವ ಹಿಂದೂ ಸಮಾವೇಶ ವಿರೋಧಿಸಿ ಶನಿವಾರ ಇಲ್ಲಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಸಮಾನತೆಗಾಗಿ ನಾವು ಸಂಘಟನೆ ಆಶ್ರಯದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳ ಆಶ್ರಯದಲ್ಲಿ ವಚನ ಅರಿವಿನ ಮಹಾಯಾನ, ವಚನಗಳ ಸಾಮೂಹಿಕ ಪಠಣ ಹಾಗೂ ಸಂವಿಧಾನದ ಪೂರ್ವ ಪೀಠಿಕೆಯ ಸಮಾನತೆಯ ಉದ್ಘೋಷ ಕಾರ್ಯಕ್ರಮ ನಡೆಯಿತು.
ಲಿಂಗಾಯತ ಧರ್ಮಕ್ಕೆ ಬಸವಣ್ಣ, ಶರಣರು ಮತ್ತು ವಚನಗಳೇ ಆಧಾರ. ಇದು ಮಾನವೀಯತೆಯ ಹಾಗೂ ಎಲ್ಲರನ್ನೂ ಒಂದಾಗಿ ಕಾಣುವ ಸಮಾನತೆಯ ಧರ್ಮವಾಗಿದೆ. ಅದನ್ನು ನಾಶ ಮಾಡುವುದಕ್ಕಾಗಿಯೇ ಹಿಂದೂ ಸಮಾವೇಶದ ಹೆಸರಿನಲ್ಲಿ ಅದನ್ನು ಒಡೆಯುವ ಹುನ್ನಾರ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಯಾರು ಜನಿವಾರವನ್ನು ಕಿತ್ತೊಗೆದು ಸಮಾನತೆ ತಂದರೋ, ಆ ಬಸವಣ್ಣನಿಗೆ ಮತ್ತೆ ಜನಿವಾರ ತೊಡಿಸುವ ಸಂಚು ನಡೆಯುತ್ತಿದೆ. ದೇಹವೇ ದೇವಾಲಯ ಎಂದ ಬಸವಣ್ಣನ ತತ್ವಕ್ಕೂ ಊರಿಗೊಂದು, ಓಣಿಗೊಂದು ದೇವಾಲಯ ನಿರ್ಮಿಸಿ, ಮಹಿಳೆಯರನ್ನು ದೇವದಾಸಿಯರನ್ನಾಗಿ ಮಾಡಿದ ಧರ್ಮಕ್ಕೂ ಸಾಮ್ಯತೆ ಕಲ್ಪಿಸಲಾಗುತ್ತಿದೆ ಎಂದು ಆರೋಪಿಸಿದರು.
ಜಗತ್ತಿಗೆ ಬೆಳಕಿನ ದಾರಿ ತೋರಿದವರು ಬುದ್ಧ. ಅದಾದ ನಂತರ ಬಸವಣ್ಣ ಲಿಂಗಾಯತ ಎನ್ನುವ ಸಮಾನತೆಯ ಧರ್ಮವನ್ನು ಕೊಟ್ಟರು. ಸ್ವಾತಂತ್ರ್ಯ ನಂತರ ಡಾ. ಅಂಬೇಡ್ಕರ್ ಅವರು, ಬುದ್ಧ ಮತ್ತು ಬಸವಣ್ಣನ ಆಶಯಗಳಿಗೆ ಕಾನೂನಾತ್ಮಕ ಚೌಕಟ್ಟು ರೂಪಿಸಿಕೊಟ್ಟು, ಸಂವಿಧಾನದ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರು. ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಿಲ್ಲ ಎನ್ನುವ ಸಂದೇಶ ನೀಡಿದರು. ಹೀಗಿದ್ದರೂ ಸಮಾನತೆಯ ವಿರುದ್ಧ ಇವತ್ತು ಮಾತುಗಳು ಕೇಳಿಬರುತ್ತಿವೆ. ಸಮಾನತೆಯನ್ನು ವಿರೋಧಿಸುವವರು ರಾಷ್ಟ್ರದ್ರೋಹಿಗಳು ಎಂದರು.ಈ ವೇಳೆ ಬಸವರಾಜ ಸೂಳಿಭಾವಿ, ಅಶೋಕ ಬರಗುಂಡಿ, ಶೇಕಣ್ಣ ಕವಳಿಕಾಯಿ, ಶಿವಾನಂದ ತಮ್ಮಣ್ಣವರ, ಎಂ.ಎಸ್. ಹಡಪದ, ಗೌರಕ್ಕ ಬಡಿಗಣ್ಣವರ, ಎಚ್.ಎಸ್. ಹರ್ಲಾಪುರ, ರವೀಂದ್ರ ಹೊನವಾಡ, ಮುತ್ತು ಬಿಳೆಯಲಿ, ಎಸ್.ಎನ್. ಬಳ್ಳಾರಿ, ರಾಮಚಂದ್ರ ಹಂಸನೂರ, ಶರೀಫ್ ಬಿಳೆಯಲಿ, ಪರಶು ಕಾಳೆ, ಮಲ್ಲಿಕಾರ್ಜುನ ಖಂಡಮ್ಮನವರ, ಎ.ಈ. ನವಲಗುಂದ, ಎ.ಕೆ. ಮುಲ್ಲಾನವರ, ಪಾಲಾಕ್ಷಿ ಗಡದಿನ್ನಿ ಹಾಗೂ ಮುತ್ತು ಹಾಳಕೇರಿ ಇದ್ದರು.
ಬಸವಾದಿ ಶಿವಶರಣರ ವಚನಗಳ ಸಾಮೂಹಿಕ ಪಠಣ ನಡೆಯಿತು. ಶರೀಫ್ ಬಿಳಿಯಲಿ ಹಾಗೂ ಸಂಗಡಿಗರು ವಚನಗೀತೆ ಹಾಡಿದರು. ಸಂಘಟಕರು ಸಾರ್ವಜನಿಕರಿಗೆ ಸಾವಿರಾರು ಸಂಖ್ಯೆಯಲ್ಲಿ ಕರಪತ್ರಗಳನ್ನು ಕೊಟ್ಟು ಜಾಗೃತಿ ಮೂಡಿಸಿದರು.