ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಗುಂಡಾಲ್ ಜಲಾಶಯದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಒತ್ತುವರಿಗಳ ವಿರುದ್ಧ ಹಾಗೂ ಸಾರ್ವಜನಿಕ ಆಸ್ತಿಗಳ ರಕ್ಷಣೆಗಾಗಿ, ಗುಂಡಾಲ್ ಜಲಾಶಯ ಹಳೆ ಸ್ಥಿರ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ಸೋಮವಾರ ಪ್ರಾರಂಭವಾಯಿತು.ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ ರೈತರು ಹಾಗೂ ಸಂಘದ ಪದಾಧಿಕಾರಿಗಳು, ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.ಈ ವೇಳೆ ಸಂಘದ ಅಧ್ಯಕ್ಷ ದಶರಥ ಮಾತನಾಡಿ, ಟಗರಪುದಿಂದ ಗೋಪಿನಾಥಂವರೆಗಿನ ಪ್ರದೇಶದಲ್ಲಿ ರೈತರ ಜಮೀನುಗಳು, ಕಾಲುವೆಗಳು, ಕೆರೆಗಳು, ಗೋಮಾಳ, ಸ್ಮಶಾನ ಮತ್ತು ಬಂಡಿದಾರಿ ಪ್ರದೇಶಗಳು ಅಕ್ರಮವಾಗಿ ಆಕ್ರಮಣಕ್ಕೊಳಗಾಗಿವೆ. ಇವುಗಳನ್ನು ಮೂಲ ದಾಖಲೆ ಆಧಾರದ ಮೇಲೆ ತಿದ್ದುಪಡಿ ಮಾಡುವವರೆಗೆ ಧರಣಿಯನ್ನು ಮುಂದುವರೆಸಲಾಗುವುದು ಎಂದು ಹೇಳಿದರು.ಇನ್ನು ಕಾವೇರಿ ನದಿಗೆ ಗಲೀಜು ನೀರು ಮತ್ತು ಯುಜಿಡಿ ನೀರು ಬಿಡುವ ಪ್ರಕರಣಗಳನ್ನು ಕೂಡ ಅವರು ಉಲ್ಲೇಖಿಸಿದರು. ಇವು ಪರಿಸರದೊಂದಿಗೆ ರೈತರ ಜಮೀನಿಗೂ ನಷ್ಟ ತರುತ್ತಿವೆ. ಮೇಲಾಗಿ ಕೆರೆಗಳು, ರಸ್ತೆಗಳು, ಕಾಲುವೆಗಳು ಹಾಗೂ ಲೋಕೋಪಯೋಗಿ ಸೌಕರ್ಯಗಳು ನಾಶವಾಗುತ್ತಿವೆ. ಹೀಗಾಗಿ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಧರಣಿಯಲ್ಲಿ ಸಂಘದ ಕಾರ್ಯದರ್ಶಿ ರಾಮಕೃಷ್ಣ, ಹಿರಿಯ ಹೋರಾಟಗಾರರು ಮಾಲಂಗಿ ರೇಚಣ್ಣ, ಸರಗೂರು ವೀರಭದ್ರಸ್ವಾಮಿ, ಚಿನ್ನಸ್ವಾಮಿ ಮಾಳಿಗೆ, ಹಿತ್ತಲದೊಡ್ಡಿ ನಾಗರಾಜು, ಮೋಳೆ ರಾಜಣ್ಣ, ಸೋಮಣ್ಣ, ಮಹದೇವಪ್ಪ, ಕುಣಗಳ್ಳಿ ಸಿದ್ದಪ್ಪ, ಮತೀನ್, ಮತ್ತು ಹೊಂಡರಬಾಳು ಅರಸು ಇದ್ದರು---30ಸಿಎಚ್‌ಎನ್56ಕೊಳ್ಳೇಗಾಲದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ರೈತರು ಹಾಗೂ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.