ಜಾನಪದ ವಿವಿ ಅಕ್ರಮ ನೇಮಕಾತಿ ವಿರೋಧಿಸಿ ಧರಣಿ

| Published : Dec 07 2023, 01:15 AM IST

ಸಾರಾಂಶ

ಜಾನಪದ ವಿಶ್ವ ವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ ಮಾಡಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿ. 8, 9ರಂದು ಸುವರ್ಣಸೌಧ ಎದುರು ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಜಾನಪದ ಸ್ನಾತಕೋತ್ತರ ಹಾಗೂ ಸಂಶೋಧಕರ ಒಕ್ಕೂಟದ ಅಧ್ಯಕ್ಷ ಡಾ. ನಿಟ್ಟೂರು ಶಿವಸೋಮಪ್ಪ ತಿಳಿಸಿದರು

ಕನ್ನಡಪ್ರಭ ವಾರ್ತೆ ಧಾರವಾಡ

ಜಾನಪದ ವಿಶ್ವ ವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ ಮಾಡಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿ. 8, 9ರಂದು ಸುವರ್ಣಸೌಧ ಎದುರು ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಜಾನಪದ ಸ್ನಾತಕೋತ್ತರ ಹಾಗೂ ಸಂಶೋಧಕರ ಒಕ್ಕೂಟದ ಅಧ್ಯಕ್ಷ ಡಾ. ನಿಟ್ಟೂರು ಶಿವಸೋಮಪ್ಪ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ನೇಮಕಾತಿಯಲ್ಲಿ ಪಾಲ್ಗೊಂಡ ಅಧಿಕಾರಿಗಳನ್ನು ಬಂಧಿಸಬೇಕು. ವಿವಿಯಲ್ಲಿ ನಡೆದ ಭ್ರಷ್ಟಾಚಾರ ತನಿಖೆಗೆ ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಕ ಮಾಡುವಂತೆ ಆಗ್ರಹಿಸಿ ಈಗಾಗಲೇ ಡಿ. 4ರಿಂದ ವಿಶ್ವ ವಿದ್ಯಾಲಯ ಎದುರು ಹೋರಾಟ ಆರಂಭಿಸಲಾಗಿದ್ದು, ಅಧಿವೇಶನದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.

ವಿವಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೂ, ಕುಲಪತಿ ಮಾತ್ರ ಎಲ್ಲವೂ ಪಾರದರ್ಶಕತೆಯಿಂದ ನಡೆದಿದೆ ಎಂದು ಹೇಳುವ ಮೂಲಕ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ವಿಷವಾಗಿ ಕುಲಪತಿ ಹಾಗೂ ಕುಲಸಚಿವರು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

2018ರಲ್ಲಿ ಅಧಿಸೂಚನೆ ಹೊರಡಿಸಿದ್ದ ನೇಮಕಾತಿಯನ್ನು 5 ವರ್ಷ ಬಳಿಕ (2023ರಲ್ಲಿ) ಮರು ಅಧಿಸೂಚನೆ ಇಲ್ಲದೆ ನೇಮಕ ಮಾಡಿದೆ. ಯುಜಿಸಿ ನಿಯಮ ಪ್ರಕಾರ ಒಂದು ಅಧಿಸೂಚನೆ ಹೊರಡಿಸಿದ 6 ತಿಂಗಳ ನಂತರ ಮತ್ತೆ ಅಧಿಸೂಚನೆ ಮಾಡಬೇಕು. ಆದರೆ, ಜಾನಪದ ವಿವಿ 5 ವರ್ಷ ಹಿಂದಿನ ಅಧಿಸೂಚನೆ ಮುಂದುವರೆಸಿದ್ದು ತಪ್ಪು ಎಂದು ದೂರಿದರು.

ಈ ಕುರಿತು ಹೋರಾಟ ನಡೆಸಿ ಮುಖ್ಯಮಂತ್ರಿ, ಸಚಿವರು ಹಾಗೂ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಸರ್ಕಾರ ಅಕ್ರಮ ನೇಮಕಾತಿ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು ಎಂದರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ. ಬಿ.ಎಂ. ದುಗ್ಗಾಣಿ, ಮಂಜುನಾಥ ಮಾಳಗೇಕರ, ಶರಣಪ್ಪ ಪೂಜಾರ, ಕುಮಾರ, ಇತರರು ಇದ್ದರು.