ಸಾರಾಂಶ
ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಾಯಕ ವಾಲ್ಮೀಕಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಅನ್ಯ ಬೇರೆ ಜಾತಿಯವರನ್ನು ಸೇರ್ಪಡೆ ಮಾಡಬಾರದು ಎಂದು ಒತ್ತಾಯಿಸಿ ವಾಲ್ಮೀಕಿ ಸಮುದಾಯದವರು ಗಂಗಾವತಿಯ ವಾಲ್ಮೀಕಿ ವೃತ್ತದ ಆಂಜನೇಯ ದೇವಸ್ಥಾನದ ಸಭಾಭವನದಲ್ಲಿ ಪ್ರತಿಭಟನೆ ನಡೆಸಿದರು.
ಗಂಗಾವತಿ: ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಾಯಕ ವಾಲ್ಮೀಕಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಅನ್ಯ ಬೇರೆ ಜಾತಿಯವರನ್ನು ಸೇರ್ಪಡೆ ಮಾಡಬಾರದು ಎಂದು ಒತ್ತಾಯಿಸಿ ವಾಲ್ಮೀಕಿ ಸಮುದಾಯದವರು ವಾಲ್ಮೀಕಿ ವೃತ್ತದ ಆಂಜನೇಯ ದೇವಸ್ಥಾನದ ಸಭಾಭವನದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ತಾಲೂಕು ಅಧ್ಯಕ್ಷ ವಡ್ರಟ್ಟಿ ವೀರಭದ್ರಪ್ಪ ನಾಯಕ ಮಾತನಾಡಿ, ರಾಜ್ಯ ಸರ್ಕಾರ ಹಮ್ಮಿಕೊಂಡಿರುವಂತ ಜಾತಿ ಗಣತಿಯ ನೆಪದಲ್ಲಿ ಪರಿಶಿಷ್ಟ ಪಂಗಡಕ್ಕೆ ಸಂಬಂಧಪಟ್ಟಂತೆ ಅನ್ಯ ಜಾತಿಯವರಾದ ಕುರುಬರು, ಉಪ್ಪಾರರು, ಕಬ್ಬಲಿಗರು ಸೇರಿದಂತೆ ಅನೇಕ ಜಾತಿಯವರನ್ನು ಸೇರಿಸುವ ಹುನ್ನಾರ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಜೋಗದ ಹನುಮಂತಪ್ಪ ನಾಯಕ ಮಾತನಾಡಿ, ರಾಜ್ಯಾದ್ಯಂತ 224 ಕ್ಷೇತ್ರದಲ್ಲಿ ಒಂದೇ ಬಾರಿಗೆ ಸೆ. 25ರಂದು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ವತಿಯಿಂದ ಅನ್ಯ ಜಾತಿಯವರನ್ನು ಎಸ್‌ಟಿ ವರ್ಗಕ್ಕೆ ಸೇರ್ಪಡೆ ಮಾಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತದೆ. ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣಪತ್ರ ನೀಡುತ್ತಿರುವ ಅಧಿಕಾರಿಗಳನ್ನು ಸರ್ಕಾರಿ ಕೆಲಸದಿಂದ ವಜಾಗೊಳಿಸಿ, ಅಂಥವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಜೋಗದ ನಾರಾಯಣಪ್ಪ ನಾಯಕ, ಕೃಷ್ಣಪ್ಪ ನಾಯಕ, ಬಸಪ್ಪ ನಾಯಕ, ಹೊಸ ಮಲೆ ಮಲ್ಲೇಶಪ್ಪ, ಚೌಡಕಿ ಹನುಮಂತಪ್ಪ, ಬ್ಯಾಂಕ್ ಅಂಜಿನಪ್ಪ, ಅರ್ಜುನ್ ನಾಯಕ, ಪಂಪಣ್ಣ ನಾಯಕ, ವಿಕಾಸ ಗೌಡ ನಾಯಕ್, ಹನುಮೇಶ್ ಹಸೆಕಟಗಿ ವಕೀಲರು, ದೇವಪ್ಪ ನಾಯಕ, ಯಮನೂರಪ್ಪ ನಾಯಕ, ಕೆಂಚಪ್ಪ, ದುರ್ಗಪ್ಪ ದಳಪತಿ, ಆನಂದಗೌಡ, ಆಗೋಲಿ ಶರಣಪ್ಪ, ಸಂಘದ ಪ್ರಧಾನ ಕಾರ್ಯದರ್ಶಿ ಎ.ಜೆ. ರಂಗನಾಥ ಭಾಗವಹಿಸಿದ್ದರು.