ಬಸ್‌ ಪ್ರಯಾಣ ದರ ಹೆಚ್ಚಳ ಖಂಡಿಸಿ ಪ್ರತಿಭಟನೆ

| Published : Jan 05 2025, 01:32 AM IST

ಸಾರಾಂಶ

ಆಧುನಿಕ ಬದುಕಿನ ಮೂಲ ಅವಶ್ಯಕತೆಯಾಗಿರುವ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.

ಧಾರವಾಡ:

ಬಸ್ ಪ್ರಯಾಣ ದರ ಹೆಚ್ಚಳ ಹಿಂಪಡೆಯಲು ಆಗ್ರಹಿಸಿ ಧಾರವಾಡ ಉಪನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣದ ಎದುರು ಶನಿವಾರ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನ ವಿರೋಧಿ ನೀತಿ ಅನುಸರಿಸಿ ಜನಸಾಮಾನ್ಯರ ಮೇಲೆ ಹೊರೆ ಹಾಕುತ್ತಿವೆ. ಅಡುಗೆ ಎಣ್ಣೆ, ಬೇಳೆ, ಕಾಳು ಕಡಿ, ಆಹಾರ ಪದಾರ್ಥಗಳ ಬೆಲೆ ಏರಿಕೆ, ಇಂಧನ ದರ ಹೆಚ್ಚಳದಿಂದ ರಾಜ್ಯದ ಜನರು ಬಸವಳಿದಿದ್ದಾರೆ. ಆಧುನಿಕ ಬದುಕಿನ ಮೂಲ ಅವಶ್ಯಕತೆಯಾಗಿರುವ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಹೊಸ ವರ್ಷಕ್ಕೆ ಸರ್ಕಾರವು ಜನರಿಗೆ ಸಂಕಷ್ಟ ತರುವ ಉಡುಗೊರೆ ನೀಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಶಕ್ತಿ ಯೋಜನೆಯ ಬಾಕಿ ಹಣವನ್ನು ತಡ ಮಾಡದೆ ಸಾರಿಗೆ ನಿಗಮಗಳಿಗೆ ಪಾವತಿಸಬೇಕು. ಸಾರಿಗೆ ನಿಗಮಗಳಲ್ಲಿರುವ ಭ್ರಷ್ಟಾಚಾರ, ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಸಾರಿಗೆ ಸಂಸ್ಥೆ ಬಸ್ ಪ್ರಯಾಣ ದರ ಹೆಚ್ಚಳವನ್ನು ಕೂಡಲೇ ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಹಿರಿಯ ಸದಸ್ಯ ಗಂಗಾಧರ ಬಡಿಗೇರ, ದೀಪಾ ಧಾರವಾಡ, ಮಧುಲತಾ ಗೌಡರ, ಶರಣು ಗೋನವರ ರಣಜಿದ್ ದೂಪ್ಪದ, ಭವಾನಿಶಂಕರ್ ಗೌಡರ, ದುರಗಪ್ಪ ಕಲ್ಲೂರ, ಅನುಸೂಯ, ಸ್ಫೂರ್ತಿ ಚಿಕ್ಕಮಠ ಇದ್ದರು.