ಆಧುನಿಕ ಯುಗದಲ್ಲಿ ಮನುಷ್ಯ ಒತ್ತಡದ ಮಧ್ಯೆ ಬದುಕುತ್ತಿದ್ದಾನೆ. ಇದರಿಂದ ಮನುಷ್ಯನಿಗೆ ಹಲವಾರು ರೋಗಗಳು ಬಾಧಿಸುತ್ತಿವೆ. ಆದ್ದರಿಂದ ಮನುಷ್ಯ ಒತ್ತಡ ಜೀವನದಿಂದ ಹೊರಬರಬೇಕೆಂದರೆ ಆಧ್ಯಾತ್ಮಿಕತೆಯ ಕಡೆ ಸಮಯ ನೀಡಿ ಧ್ಯಾನ, ಯೋಗ ಮಾಡಬೇಕು.
ಕನ್ನಡಪ್ರಭ ವಾರ್ತೆ ಗುಬ್ಬಿ
ಜ್ಞಾನ ಮತ್ತು ಯೋಗದಿಂದ ಆತ್ಮಕ್ಕೆ ಬಲ ಬಂದು ಪ್ರಕೃತಿ ಪರಿವರ್ತನೆಯಾಗಲಿದೆ ಎಂದು ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ತಿಳಿಸಿದರು.ಪಟ್ಟಣದ ಗುರುಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಗುಬ್ಬಿ ಶಾಖೆ ವತಿಯಿಂದ ಏರ್ಪಡಿಸಿದ್ದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ನಾವು ನೂತನ ವರ್ಷವನ್ನು ಕೇಕ್ ಕಟ್ ಮಾಡುವ ಮೂಲಕ ಆಚರಣೆ ಮಾಡುತ್ತಿದ್ದೇವೆ. ಭಾರತೀಯ ಸಂಸ್ಕೃತಿಯ ಪ್ರಕಾರ ಯುಗಾದಿ ಹಬ್ಬವು ನಮಗೆ ನೂತನ ವರ್ಷವಾಗಿದೆ. ಭಾರತ ಆಧ್ಯಾತ್ಮಿಕ ದೇಶವಾಗಿದ್ದು, ಇಡೀ ಪ್ರಪಂಚಕ್ಕೆ ಜ್ಞಾನ ಹಂಚುವ ಶಕ್ತಿ ಹೊಂದಿದೆ. ಆಧುನಿಕ ಯುಗದಲ್ಲಿ ಮನಸ್ಸುಗಳು ಹಂಚಿ ಹೋಗಿದ್ದು, ಇವುಗಳನ್ನು ಒಂದುಗೂಡಿಸುವ ಶಕ್ತಿ ಆಧ್ಯಾತ್ಮಿಕತೆಗೆ ಇದೆ ಎಂದರು.
ಆಧ್ಯಾತ್ಮಿಕ ಜ್ಞಾನದಿಂದ ಜೀವನದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ನಕಾರಾತ್ಮಕ ಚಿಂತನೆಯಿಂದ ದೂರ ಉಳಿಯಲು ಇದು ಸಹಕಾರಿಯಾಗಿದೆ. ಕರ್ಮದಲ್ಲಿ ಶುದ್ಧತೆಯಿಟ್ಟುಕೊಳ್ಳಬೇಕು. ಕರ್ಮ ಶ್ರೇಷ್ಠತೆ ಮಾತ್ರ ಮಾನವನನ್ನು ಮರಣಾನಂತರವೂ ಹಿಂಬಾಲಿಸುತ್ತದೆ. ಜೀವನವನ್ನು ಸುಧಾರಿಸಿಕೊಳ್ಳಲು ಭಗವಂತನು ಕಲಿಸುವ ರಾಜಯೋಗವು ಸಹಕಾರಿಯಾಗುತ್ತದೆ. ದಿನದ 24 ಗಂಟೆಯಲ್ಲಿ ಒಂದು ಗಂಟೆಯನ್ನು ಆಧ್ಯಾತ್ಮಿಕ ಪ್ರವಚನ ಕೇಳಲು ಮೀಸಲಿಟ್ಟರೆ ಆರೋಗ್ಯ, ನೆಮ್ಮದಿ ಲಭಿಸುತ್ತದೆ ಎಂದು ತಿಳಿಸಿದರು.ಪಪಂ ಮಾಜಿ ಸದಸ್ಯ ಶಿವಕುಮಾರ್ ಮಾತನಾಡಿ, ಆಧುನಿಕ ಯುಗದಲ್ಲಿ ಮನುಷ್ಯ ಒತ್ತಡದ ಮಧ್ಯೆ ಬದುಕುತ್ತಿದ್ದಾನೆ. ಇದರಿಂದ ಮನುಷ್ಯನಿಗೆ ಹಲವಾರು ರೋಗಗಳು ಬಾಧಿಸುತ್ತಿವೆ. ಆದ್ದರಿಂದ ಮನುಷ್ಯ ಒತ್ತಡ ಜೀವನದಿಂದ ಹೊರಬರಬೇಕೆಂದರೆ ಆಧ್ಯಾತ್ಮಿಕತೆಯ ಕಡೆ ಸಮಯ ನೀಡಿ ಧ್ಯಾನ, ಯೋಗ ಮಾಡಬೇಕು. ಹಣ-ಆಸ್ತಿ ಎಷ್ಟಿದ್ದರೇನು, ಮನುಷ್ಯನಿಗೆ ಅಗತ್ಯವಿರುವುದು ನೆಮ್ಮದಿ ಮತ್ತು ಮನಃಶಾಂತಿ ಮಾತ್ರ. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯಗಳು ಮನುಷ್ಯನಲ್ಲಿ ಮನಃಶಾಂತಿ ತುಂಬುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಆಯುರ್ವೇದಿಕ್ ವೈದ್ಯ ಹನುಮಂತಪ್ಪ, ಪತಂಜಲಿ ಯೋಗ ಸಮಿತಿಯ ಸಂಚಾಲಕ ಮಹದೇವಯ್ಯ, ಬಸವರಾಜ್, ಇಂಜಿನಿಯರ್ ಕರಿಗಿರಿ, ಉದಯ, ರಾಮಣ್ಣ, ನಿವೃತ್ತ ಶಿಕ್ಷಕ ಬಸವರಾಜು , ಸಂಚಾಲಕಿ ಜಯಶ್ರೀ ಅಕ್ಕನವರು ಮತ್ತಿತರರು ಇದ್ದರು.