ಸಾರಾಂಶ
ಒಳ ಮೀಸಲಾತಿ ವರ್ಗಿಕರಣ ವಿರೋಧಿಸಿ ಸೆ.12ರಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ಬಂಜಾರ ಸಂಘ, ಕರ್ನಾಟಕ ಬಂಜಾರ (ಲಂಬಾಣಿ) ಹಕ್ಕು ಸಂರಕ್ಷಣಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷರು, ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ತಿಳಿಸಿದರು.
ಶಿವಮೊಗ್ಗ: ಒಳ ಮೀಸಲಾತಿ ವರ್ಗಿಕರಣ ವಿರೋಧಿಸಿ ಸೆ.12ರಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ಬಂಜಾರ ಸಂಘ, ಕರ್ನಾಟಕ ಬಂಜಾರ (ಲಂಬಾಣಿ) ಹಕ್ಕು ಸಂರಕ್ಷಣಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷರು, ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 10 ಗಂಟೆಗೆ ಅನಿರ್ದಿಷ್ಟಾವಧಿ ಧರಣಿ ಆರಂಭವಾಗಲಿದೆ. ಇದರಲ್ಲಿ ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ ಮತ್ತು ಸೊರಬದ ವಿವಿಧ ಗ್ರಾಮಗಳ ಬಂಜಾರರು ಪಾಳಿ ಪ್ರಕಾರ ಭಾಗವಹಿಸುವರು ಎಂದರು.ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸಲು ರಚನೆಯಾಗಿದ್ದ ನಿವೃತ್ತ ನ್ಯಾ.ನಾಗಮೋಹನದಾಸ ಏಕಸದಸ್ಯ ಆಯೋಗವು ಇತ್ತೀಚೆಗೆ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನೆ ಕೆಲವು ಬದಲಾವಣೆಯೊಂದಿಗೆ ರಾಜ್ಯ ಸರ್ಕಾರ ಜಾರಿಗೊಳಿಸಿರುವುದು ಬಂಜಾರ ಸಮುದಾಯ ಸೇರಿದಂತೆ ಇತರೆ ಸಮುದಾಯಗಳಲ್ಲಿ ಆತಂಕವನ್ನುಂಟು ಮಾಡಿದೆ ಎಂದರುಸುಪ್ರೀಂ ಕೋರ್ಟಿನ ಮಾನದಂಡಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಸಿದ್ಧಪಡಿಸಲಾಗಿರುವ ನಾಗಮೋಹನದಾಸ ವರದಿಯು ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ಮುಂದುವರೆದ ಭಾಗದಂತಿದೆ. ಈ ವರದಿಯ ಸಾರಾಂಶಗಳು ವಾಸ್ತವಿಕ ಅಂಕಿ ಸಂಖ್ಯೆಗಳಿಂದ ದೂರವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ, ಶಿಕ್ಷಣ, ಉದ್ಯೋಗ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಯ ಅಂಕಿ ಅಂಶಗಳು ದಮನಿತ ಸಮುದಾಯಗಳ ಅನುಮಾನಕ್ಕೆ ಕಾರಣವಾಗಿದೆ ಎಂದರು.ಈ ಅಂಕಿ ಸಂಖ್ಯೆಗಳು ಯಾವಮೂಲದಿಂದ ಪಡೆಯಲಾಗಿದೆ ಎಂಬುದನ್ನು ಆಯೋಗ ಸ್ಪಷ್ಟಪಡಿಸಬೇಕಿದೆ. ನಾಗಮೋಹನದಾಸರವರು ವರದಿಯಲ್ಲಿ ತಿಳಿಸಿರುವಂತೆ ಸರ್ಕಾರದ ಕೆಲವು ಇಲಾಖೆಗಳು ಪರಿಶಿಷ್ಟ ಜಾತಿಯ ಅಂಕಿ ಸಂಖ್ಯೆಗಳು ನೀಡಿರುವುದಿಲ್ಲ, ಕೆಲವು ಕುಟುಂಬಗಳು ನಗರ ಹಾಗೂ ಗ್ರಾಮದಲ್ಲಿ ಅಲಭ್ಯತೆಯ ಕಾರಣಕ್ಕೆ ಸಮೀಕ್ಷೆ ಅಪೂರ್ಣವಾಗಿದೆ ಎಂದು ತಿಳಿಸಿರುವಾಗ, ಸರ್ಕಾರ ಈ ಅಪೂರ್ಣ ವರದಿಯನ್ನೇ ಸಣ್ಣಪುಟ್ಟ ಬದಲಾವಣೆಯೊಂದಿಗೆ ಜಾರಿಗೊಳಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ವಿವರಿಸಿದರು. ನಾಗಮೋಹನದಾಸ ವರದಿಯಲ್ಲಿರುವ 324, 325, 326ನೇ ಪುಟದಲ್ಲಿ ಇಡೀ ಸಮೀಕ್ಷೆಯ ಫಲಿತಾಂಶವನ್ನು ವಿಶ್ಲೇಷಿಸಿ, ಸಿದ್ಧಪಡಿಸಿರುವ ಕೋಷ್ಟಕದಲ್ಲಿ 26 ವಿವಿಧ ವಿಷಯಗಳ ಮಾನದಂಡಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಆಯಾ ಜಾತಿಗಳ ಪ್ರಗತಿಯ ಮೇಲೆ ಸಿದ್ಧಪಡಿಸಿರುವ 23 ವಿಷಯವಾರು ಮಾನದಂಡಗಳಲ್ಲಿ ’ಡಿ’ ಗುಂಪಿನಲ್ಲಿ ಬರುವ ಲಂಬಾಣಿ ಮತ್ತು ಇತರೆ ಸಮುದಾಯ ಕೇವಲ 6 ವಿಷಯಗಳಲ್ಲಿ ಮಾತ್ರ ತುಸು ಮುಂದಿವೆ ಎಂದು ಕಾಣಿಸಲಾಗಿದೆ. ಉಳಿದ 17 ವಿಷಯಗಳಲ್ಲಿ ’ಸಿ’ ಗುಂಪಿಗಿಂತ ತುಂಬಾ ಹಿಂದುಳಿದಿದೆ ಎಂದು ಅಂಕಿ ಸಂಖ್ಯೆಗಳ ಮೂಲಕ ತೋರಿಸಲಾಗಿದೆ. ವಿಷಯ ಹೀಗಿರುವಾಗ ’ಡಿ’ ಗುಂಪಿಗಿಂತ ’ಸಿ’ ಗುಂಪಿನ ಸಮುದಾಯಕ್ಕೆ ಶೇಕಡವಾರು ಹೆಚ್ಚಿನ ಮೀಸಲಾತಿ ನೀಡಿರುವುದು ಯಾವ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಹುನ್ನಾರವಿದೆ ಎಂಬುದನ್ನು ನಾಗಮೋಹನ್‌ದಾಸರವರೇ ಹೇಳಬೇಕಿದೆ ಎಂದರು.ಯಾವುದೇ ದೃಷ್ಟಿಕೋನದಿಂದಲೂ ಹೊಂದಾಣಿಕೆ ಆಗದ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯದ ’ಸಿ’ ವರ್ಗದವರೊಂದಿಗೆ ಸೇರಿಸಿ ಅಲೆಮಾರಿಗಳಿಗೆ ಮೀಸಲಾತಿಯಿಂದ ವಂಚನೆ ಮಾಡಲು ಮುಂದಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಹಲವು ಆಯೋಗಗಳ ವರದಿಯಲ್ಲಿ ತಿಳಿಸಿರುವಂತೆ ಅಲೆಮಾರಿಗಳಿಗೂ ಶೇ. 1ರಷ್ಟು ಮೀಸಲಾತಿ ನೀಡಬೇಕು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ ಸಿ ವರ್ಗದಲ್ಲಿ ಬರುವ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯದವರಿಗೂ ಶೇ.6ರಷ್ಟು ಮೀಸಲಾತಿ ನಿಗದಿಗೊಳಿಸಲು ಸರ್ಕಾರ ಮುಂದಾಗಬೇಕಿದೆ ಎಂದರು.ಪತ್ರಿಕಾಗೋಷ್ಠಿಲ್ಲಿ ಪ್ರಮುಖರಾದ ನಾಗೇಶ್ ನಾಯ್ಕ್, ನಾನ್ಯಾನಾಯ್ಕ್, ಶೇಖರ್ ನಾಯ್ಕ್, ಮಂಜುನಾಥ್, ವಾಸುದೇವನಾಯ್ಕ್, ಎನ್.ಕೆ.ನಾಯ್ಕ್ ಇತರರಿದ್ದರು.