ಹೊಸಕೋಟೆಯಲ್ಲೂ ವೈದ್ಯೆ ಹತ್ಯೆ ಖಂಡಿಸಿ ಪ್ರತಿಭಟನೆ

| Published : Aug 18 2024, 01:48 AM IST

ಸಾರಾಂಶ

ಕೋಲ್ಕತ್ತದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ತರಬೇತಿನಿರತ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಹತ್ಯೆ, ಆಸ್ಪತ್ರೆ ಧ್ವಂಸ ಮಾಡಿರುವುದನ್ನು ಖಂಡಿಸಿ ಹೊಕೋಟೆ ತಾಲೂಕು ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು.

-ಆಸ್ಪತ್ರೆಗಳ ಒಪಿಡಿ ಬಂದ್ -ರಕ್ಷಣೆ ಕೋರಿ ತಹಸೀಲ್ದಾರ್, ಡಿವೈಎಸ್‌ಪಿಗೆ ವೈದ್ಯರ ಮನವಿ ಕನ್ನಡಪ್ರಭ ವಾರ್ತೆ ಹೊಸಕೋಟೆ

ಕೋಲ್ಕತ್ತದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ತರಬೇತಿನಿರತ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಹತ್ಯೆ, ಆಸ್ಪತ್ರೆ ಧ್ವಂಸ ಮಾಡಿರುವುದನ್ನು ಖಂಡಿಸಿ ತಾಲೂಕು ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು.

ನಗರದ ಕೆಇಬಿ ವೃತ್ತದಿಂದ ಶಾಂತಿಯುತ ಮೆರವಣಿಗೆಯಲ್ಲಿ ಹೊರಟ ವೈದ್ಯರು ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ನರೇಂದ್ರಬಾಬು ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸ ಆಸ್ಪತ್ರೆಯ ಡಾ.ನಾಗರಾಜ್, ಅಖಿಲ ಭಾರತ ವೈದ್ಯಕೀಯ ಸಂಘದ ಸೂಚನೆಯಂತೆ ತುರ್ತು ಚಿಕಿತ್ಸಾ ವಿಭಾಗ ಮತ್ತು ಅಪಘಾತ ವಿಭಾಗಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಿಭಾಗಗಳಲ್ಲಿ 24 ಗಂಟೆ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿದ್ದು, ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಕೋಲ್ಕತಾದಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಇಡೀ ದೇಶ ಹಾಗೂ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜಾಗಿದೆ. ಆದ್ದರಿಂದ ಸಬಂದಪಟ್ಟ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಿ ಪಕ್ಷತೀತವಾಗಿ ತನಿಖೆ ನಡೆಸಿ ಕಾನೂನು ರೀತಿಯ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಸಿಲಿಕಾನ್ ಸಿಟಿ ಆಸ್ಪತ್ರೆ ವೈದ್ಯ ಡಾ.ಸುಪ್ರೀತ್ ಮಾತನಾಡಿ, ಕೊಲ್ಕತಾದಲ್ಲಿ ನಡೆದ ವೈದ್ಯೆಯ ಅತ್ಯಾಚಾರ, ಕೊಲೆ ಘೋರವಾಗಿದೆ. ಸರ್ಕಾರಗಳು ಕಾರ್ಯನಿರತ ವೈದ್ಯರಿಗೆ ಸೂಕ್ತ ರಕ್ಷಣೆಯನ್ನು ನೀಡಬೇಕು, ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಕೃತ್ಯಗಳು ಮರುಕಳಿಸದಂತೆ ಸರ್ಕಾರ ಸೂಕ್ತ ಎಚ್ಚರಿಕೆ ಕ್ರಮ ವಹಿಸಬೇಕು. ವೈದ್ಯರ ಸೇವೆಗೆ ಅಡ್ಡಿಪಡಿಸುವ ಹಾಗೂ ಆಸ್ಪತ್ರೆಗೆ ಹಾನಿಯುಂಟು ಮಾಡುವವರ ವಿರುದ್ಧ ರಾಜ್ಯದಲ್ಲಿ 2009ರಲ್ಲಿ ಜಾರಿಗೊಳಿಸಿರುವ ವೈದ್ಯಕೀಯ ಸೇವಾ ಸಿಬ್ಬಂದಿಯ ವಿರುದ್ಧ ಹಿಂಸಾಚಾರದ ನಿಷೇಧ ಮತ್ತು ವೈದ್ಯಕೀಯ ಸೇವಾ ಸಂಸ್ಥೆಗಳಲ್ಲಿನ ಆಸ್ತಿ ಹಾನಿ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ವೈದ್ಯರಿಗೆ, ಆಸ್ಪತ್ರೆಗಳಿಗೆ ರಕ್ಷಣೆ ನೀಡಿ ಭದ್ರತೆ ಒದಗಿಸಬೇಕು.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ..ಜಿ.ರಾಮಚಂದ್ರ, ಕಾರ್ಯದರ್ಶಿ ಡಾ.ಅರುಣ್‌ಕುಮಾರ್, ಸದಸ್ಯರಾದ ಡಾ.ಗೀತಾ, ಡಾ.ಅನಿತಾ, ಡಾ.ಗಿರಿಜಾ, ಡಾ.ಸಂಜಯ್ ಕುಮಾರ್, ಡಾ.ನಂದಿನಿ, ಡಾ.ಸುನಿಲ್, ಎಂವಿಜೆ ಆಸ್ಪತ್ರೆಯ ಡಾ. ಪ್ರಮೋದ್, ಖಾಸಗಿ ಆಸ್ಪತ್ರೆಗಳ ಶುಶ್ರೂಷಕಿಯರು, ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದರು.