ಸಿದ್ದಾಪುರ ತಾಲೂಕಿನ ಹೊಸೂರಲ್ಲಿ ಮದ್ಯದಂಗಡಿ ವಿರೋಧಿಸಿ ಪ್ರತಿಭಟನೆ

| Published : Jul 06 2025, 01:52 AM IST

ಸಿದ್ದಾಪುರ ತಾಲೂಕಿನ ಹೊಸೂರಲ್ಲಿ ಮದ್ಯದಂಗಡಿ ವಿರೋಧಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದಾಪುರ ಪಟ್ಟಣದ ಸೊರಬಾ ರಸ್ತೆಯಲ್ಲಿದ್ದ ಮದ್ಯದ ಅಂಗಡಿಯನ್ನು ಹೊಸೂರಿಗೆ ಸ್ಥಳಾಂತರಿಸಬಾರದು ಎಂದು ಆಗ್ರಹಿಸಿ ಹೊಸೂರಿನ ಸಾರ್ವಜನಿಕರು ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಶಿರಸಿಯ ಅಬಕಾರಿ ಉಪನಿರೀಕ್ಷ ತಿಮ್ಮಪ್ಪ ಬಿ. ಗೊಂಡ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಸಿದ್ದಾಪುರ: ಪಟ್ಟಣದ ಸೊರಬಾ ರಸ್ತೆಯಲ್ಲಿದ್ದ ಮದ್ಯದ ಅಂಗಡಿಯನ್ನು ಹೊಸೂರಿಗೆ ಸ್ಥಳಾಂತರಿಸಬಾರದು ಎಂದು ಆಗ್ರಹಿಸಿ ಹೊಸೂರಿನ ಸಾರ್ವಜನಿಕರು ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ, ಮದ್ಯದ ಅಂಗಡಿಯನ್ನು ಹೊಸೂರಿಗೆ ಸ್ಥಳಾಂತರಿಸಬಾರದು ಎಂದು ಹೊಸೂರಿನ ಜನರು ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಆದರೆ ಊರಿನ ಜನರ ಮನವಿಗೆ ಅಧಿಕಾರಿಗಳು ಸ್ಪಂದಿಸದೇ ಹೊಸೂರಿನಲ್ಲಿ ಮದ್ಯದ ಅಂಗಡಿ ತೆರೆಯಲಾಗಿದೆ. ಹೀಗಾಗಿ ಪ್ರತಿಭಟನೆ ನಡೆಸಿದ್ದೇವೆ ಎಂದು ಹೇಳಿದರು.

ಸ್ವಾತಂತ್ರ‍್ಯ ಹೋರಾಟಗಾರ ಚೌಡಪ್ಪ ನಾಯ್ಕ ಸರ್ಕಲ್‌ನಲ್ಲಿ ಮದ್ಯದ ಅಂಗಡಿ ಆರಂಭಿಸಿ ಸ್ವಾತಂತ್ರ‍್ಯ ಹೋರಾಟಗಾರರಿಗೆ ಅವಮಾನ ಮಾಡಬಾರದು. ಹೊಸೂರಿನ ಪ್ರೌಢಶಾಲೆಯ ಕೆಲವು ಕೊಠಡಿಗಳು ಜೀರ್ಣಾವಸ್ಥೆಯಲ್ಲಿವೆ. ಅದನ್ನು ಸರಿಪಡಿಸಲಿ. ಸ್ಥಳೀಯರ ವಿರೋಧದ ನಡುವೆಯೂ ಮದ್ಯದ ಅಂಗಡಿ ಆರಂಭಿಸಲು ಅನುಮತಿ ನೀಡಿರುವ ಸ್ಥಳೀಯ ಆಡಳಿತಕ್ಕೆ ನಮ್ಮ ಧಿಕ್ಕಾರ ಎಂದರು.

ಪಪಂ ಸದಸ್ಯ ಮಾರುತಿ ನಾಯ್ಕ ಮಾತನಾಡಿ, ಅಬಕಾರಿ ಇಲಾಖೆಯವರು ಬಂದು ಇನ್ನೊಮ್ಮೆ ಪರಿಶೀಲನೆ ಮಾಡುವವರೆಗೂ ಅಂಗಡಿ ಬಂದ್ ಮಾಡಲಿ. ಸೋಮವಾರ ಅಬಕಾರಿ ಇಲಾಖೆಯ ಅಧಿಕಾರಿಗಳು ಒಂದು ಪರಿಶೀಲನೆ ಮಾಡಿದ ಆನಂತರ ಪುನಃ ತೆರೆಯಲಿ. ಜನರ ನೆಮ್ಮದಿ ಕಸಿಯುವ ಅಂಗಡಿ ನಮಗೆ ಬೇಡ ಎಂದರು.

ತಹಸೀಲ್ದಾರ್‌ ಮಧುಸೂದನ ಕುಲಕರ್ಣಿ ಮಾತನಾಡಿ, ಕಾನೂನು ಚೌಕಟ್ಟಿನಲ್ಲಿ ಮದ್ಯದ ಅಂಗಡಿ ಆರಂಭಿಸಲು ಅನುಮತಿ ನೀಡಿರುವುದಾಗಿ ಅಬಕಾರಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಈ ಕುರಿತು ಅಬಕಾರಿ ಡಿಸಿ ಜತೆ ಮಾತನಾಡುತ್ತೇನೆ, ಆದರೆ ಇಲ್ಲಿ ಧರಣಿ ನಡೆಸಲು ಅನುಮತಿ ಇಲ್ಲ ಎಂದರು.

ಶಿರಸಿಯ ಅಬಕಾರಿ ಉಪನಿರೀಕ್ಷ ತಿಮ್ಮಪ್ಪ ಬಿ. ಗೊಂಡ ಸ್ಥಳಕ್ಕೆ ಭೇಟಿ ನೀಡಿ ಸೋಮವಾರ ಬೆಳಗ್ಗೆ ೧೧ ಗಂಟೆಗೆ ಅಬಕಾರಿ ಉಪಾಧೀಕ್ಷಕರು ಬಂದು ಇನ್ನೊಮ್ಮೆ ಸ್ಥಳ ಪರಿಶೀಲನೆ ಮಾಡುತ್ತಾರೆ ಎಂದು ಭರವಸೆ ನೀಡಿದ ಆನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ವಾಸುದೇವ ಬಿಳಗಿ ಮಾತನಾಡಿದರು. ೫೦ಕ್ಕೂ ಹೆಚ್ಚು ಹೊಸೂರಿನ ನಿವಾಸಿಗಳು ಇದ್ದರು.