ಸಾರಾಂಶ
ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ಬೆಳೆ ಪರಿಹಾರ ವಿತರಿಸಬೇಕು. ಸಹಕಾರಿ ಬ್ಯಾಂಕ್‌ಗಳು ರೈತರಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿವೆ. ರೈತರಿಗೆ ಕಡ್ಡಾಯವಾಗಿ ಸಾಲ ನೀಡಬೇಕು ಎಂದು ನಿರ್ದೇಶನ ನೀಡಬೇಕು.
ಹೊಸಪೇಟೆ: ರೈತರ ಬಗ್ಗೆ ಹಗುರವಾಗಿ ಮಾತನಾಡಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಕ್ರಮವನ್ನು ಖಂಡಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸಂಯುಕ್ತ ಹೋರಾಟ ಸಮಿತಿ ವತಿಯಿಂದ ರೈತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಜೈ ಭೀಮ್ ವೃತ್ತದಿಂದ ತಹಸೀಲ್ದಾರ್ ಕಚೇರಿಯವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದ ರೈತರು, ಸಚಿವ ಶಿವಾನಂದ ಪಾಟೀಲ್ ಅವರ ಭಾವಚಿತ್ರವನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.ಬೆಳೆ ಪರಿಹಾರ ಸಿಗುತ್ತದೆ ಮತ್ತು ಸಾಲಮನ್ನಾ ಆಗುತ್ತದೆ ಎಂಬ ಕಾರಣಕ್ಕೆ ಮೇಲಿಂದ ಮೇಲೆ ಬರ ಬರಲಿ ಎಂದು ರೈತರು ಎಂದು ಆಶಿಸುತ್ತಾರೆ ಎಂದು ಹೇಳಿಕೆ ನೀಡಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಬೇಡಿಕೆ: ಬರಗಾಲದಿಂದ ರೈತರು ಕಂಗಲಾಗಿದ್ದು, ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಬೇಕು. ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ಬೆಳೆ ಪರಿಹಾರ ವಿತರಿಸಬೇಕು. ಸಹಕಾರಿ ಬ್ಯಾಂಕ್‌ಗಳು ರೈತರಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿವೆ. ರೈತರಿಗೆ ಕಡ್ಡಾಯವಾಗಿ ಸಾಲ ನೀಡಬೇಕು ಎಂದು ನಿರ್ದೇಶನ ನೀಡಬೇಕು.ಸರ್ಕಾರಿ ಅನಾದಿನ ಹಾಗೂ ಅರಣ್ಯಭೂಮಿ ಸಾಗುವಳಿ ಮಾಡುವ ರೈತರಿಗೆ ಅದಷ್ಟು ಶೀಘ್ರ ಪಟ್ಟಾ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ದೇವರಮನಿ ಮಹೇಶ, ಎಂ. ಸೋಮಣ್ಣ, ಖಾಜಾ ಹುಸೇನ್ ನಿಯಾಜಿ, ಕೆ. ಪರಶುರಾಮಪ್ಪ, ಜೈರುದ್ದೀನ್, ಸಣ್ಣಕ್ಕಿ ರುದ್ದಪ್ಪ, ಎಂ. ದುರಗಪ್ಪ, ಗಾಳೆಪ್ಪ, ಎಂ. ಜಡಿಯಪ್ಪ, ಎನ್. ವೆಂಕಟೇಶ್ ಹಾಗೂ ಸಿದ್ದಪ್ಪ ಇತರರಿದ್ದರು.