ಬಗರ್‌ಹುಕುಂ ಬಗ್ಗೆ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ

| Published : Sep 10 2024, 01:46 AM IST

ಬಗರ್‌ಹುಕುಂ ಬಗ್ಗೆ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಪ್ರತಿಭಟನೆಗೆ ಕಾಫಿ ಬೆಳೆಗಾರರ ಸಂಘ ಹಾಗೂ ಹೊಯ್ಸಳ ಮಾಲೀಕರ ಮತ್ತು ಚಾಲಕರ ಸಂಘದ ವತಿಯಿಂದ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬಗರ್‌ಹುಕುಂ ರೈತರಿಗೆ ಹಕ್ಕು ದಾಖಲೆ ಮಾಡಿಕೊಡದೆ ಅನಗತ್ಯ ಕಿರುಕುಳ ಕೊಡುತ್ತಿರುವುದನ್ನ ವಿರೋಧಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ‌ ಹಾಗೂ ಟ್ರ್ಯಾಕ್ಟರ್‌ ಜಾಥಾ ನಡೆಸಿ ನಂತರ ತಾಲೂಕು ಕಚೇರಿ ಮುಂದೆ ನಡೆದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬೇಲೂರು

ಶಾಸಕರು ಸುಳ್ಳು ಭರವಸೆಗಳನ್ನು ನೀಡುತ್ತಾ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಕಾಲಹರಣ ಮಾಡುತ್ತಿದ್ದು ಸಹಸ್ರಾರು ರೈತರ ಬೆಳೆಗಾರರ ಬದುಕು ಅತಿವೃಷ್ಟಿಯಿಂದ ಮೂರಾಬಟ್ಟೆಯಾಗಿದೆ. ಇದರ ಜೊತೆಗೆ ಇಲಾಖೆಯಲ್ಲಿ ಕೆಲ ಅಧಿಕಾರಿಗಳು ಬಗರ್‌ಹುಕುಂ ರೈತರಿಗೆ ಅನಗತ್ಯ ಕಿರುಕುಳ ಕೊಡುತ್ತಿದ್ದು, ಲಂಚದ ಬೇಡಿಕೆ ಇಟ್ಟು ರೈತರನ್ನ ಶೋಷಣೆ ಮಾಡುತ್ತಿದ್ದಾರೆ. ಶಾಸಕರು ಸಮಸ್ಯೆಗಳ ಬಗ್ಗೆ ಚರ್ಚಿಸಲು ಸೌಜನ್ಯಕ್ಕೂ ರೈತರೊಂದಿಗೆ ಒಂದು ಸಭೆ ಕರೆದಿಲ್ಲ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಪ್ರತಿಭಟನೆಗೆ ಕಾಫಿ ಬೆಳೆಗಾರರ ಸಂಘ ಹಾಗೂ ಹೊಯ್ಸಳ ಮಾಲೀಕರ ಮತ್ತು ಚಾಲಕರ ಸಂಘದ ವತಿಯಿಂದ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬಗರ್‌ಹುಕುಂ ರೈತರಿಗೆ ಹಕ್ಕು ದಾಖಲೆ ಮಾಡಿಕೊಡದೆ ಅನಗತ್ಯ ಕಿರುಕುಳ ಕೊಡುತ್ತಿರುವುದನ್ನ ವಿರೋಧಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ‌ ಹಾಗೂ ಟ್ರ್ಯಾಕ್ಟರ್‌ ಜಾಥಾ ನಡೆಸಿ ನಂತರ ತಾಲೂಕು ಕಚೇರಿ ಮುಂದೆ ನಡೆದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಯಿತು.

ಈ ಸಂದರ್ಭದಲ್ಲಿ ಸ್ವಾಮಿಗೌಡ ಮಾತನಾಡಿ, ಶಾಸಕರು ಚುನಾವಣಾ ಪೂರ್ವದಲ್ಲಿ ಮತ್ತು ಗೆದ್ದನಂತರ ತಾಲೂಕನ್ನು ಭ್ರಷ್ಟಾಚಾರ ಮುಕ್ತ ಹಾಗೂ ಅಭಿವೃದ್ಧಿ ನನ್ನ ಗುರಿ ಎಂದು ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ. ಒಂದೂವರೆ ವರ್ಷವಾದರೂ ಶಾಸಕರಾಗಿ ರೈತರೊಂದಿಗೆ ಒಂದು ಸಭೆ ಕರೆದಿಲ್ಲ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು ತಹಸೀಲ್ದಾರ್‌ ಪ್ರತಿಭಟನಾ ಸ್ಥಳದಲ್ಲಿ ಹಾಜರಿರದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಂದುವರಿಸುತ್ತೇವೆಂದು ಹೇಳಿದರು.

ತಾಲೂಕಿನಲ್ಲಿ ಈಗಾಗಲೇ ಆನೆಗಳ ಕಾಟದಿಂದ 75ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು ಕನಿಷ್ಠ ಸೌಜನ್ಯಕ್ಕೂ ಸೂಕ್ತ ಪರಿಹಾರ ತಲುಪಿಲ್ಲ. ಬಯಲು ಸೀಮೆಯಲ್ಲಿ ಚಿರತೆಗಳ ಕಾಟ ಹೆಚ್ಚಾಗಿದೆ. ರೈತರ, ಬೆಳೆಗಾರರ ಪರಿಸ್ಥಿತಿ ಅಧೋಗತಿಗೆ ಹೋಗಿದ್ದು ಬಗರ್‌ಹುಕುಂ ಸಾಗುವಳಿದಾರರ 1460 ಖಾತೆಗಳು ಎರಡು ವರ್ಷದಿಂದ ಕಬ್ಬಿಣದ ಪೆಟ್ಟಿಗೆಯಲ್ಲಿ ಕುಳಿತಿದೆ. ಇವತ್ತು ತಾಲೂಕಿನ ಸಮಸ್ಯೆ ಅರಿವಿಲ್ಲದಂತವರು ಶಾಸಕರಾದರೆ ಏನಾಗುತ್ತದೆ ಎಂಬುದನ್ನ ನಾವು ನೇರವಾಗಿ ಅನುಭವಿಸುತ್ತಿದ್ದೇವೆ. ರೈತ ಸಂಘ ಹೇಳಿದರೂ ಕೂಡ ಕನಿಷ್ಠ ಒಂದು ಸಭೆ ಕರೆಯದೆ ಇರುವ ಕಾರಣವೇನು ಎಂದು ಪ್ರಶ್ನೆ ಮಾಡಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಭೋಗಮಲ್ಲೇಶ್ ಮಾತನಾಡಿ, ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಸಂಸದರು, ಶಾಸಕರು ಸೇರಿದಂತೆ ಜಿಲ್ಲಾಧಿಕಾರಿಗಳು ಆಗಮಿಸಿ, ನಮ್ಮ ಸಮಸ್ಯೆಗಳನ್ನ ಬಗೆಹರಿಸಬೇಕು ಇಲ್ಲದಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಂದುವರಿಸಲಾಗುವುದು ಎಂದು ಹೇಳಿದರು.

ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ದೂರಿ ಚೇತನ್ ಕುಮಾರ್ ಮಾತನಾಡಿ, ಆನೆಗಳ ಕಾಟ ಕೇವಲ ಮಲೆನಾಡಿಗೆ ಸೀಮಿತವಾಗದೆ ಬಯಲು ಸೀಮೆಯಲ್ಲೂ ಕೂಡ ನೋಡುತ್ತಿದ್ದೇವೆ, ರೈತರು ಸಾವನಪ್ಪಿರುವುದನ್ನು ಕೂಡ ಕಾಣುತ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕೇವಲ ಆನೆ ಸಮಸ್ಯೆಗಳ ಕಾಟ ಮಾತ್ರವಲ್ಲ, ತಾಲೂಕಿನ ಹತ್ತಾರು ಸಮಸ್ಯೆಗಳಿದ್ದು ರೈತರು ಹಾಗೂ ಬೆಳೆಗಾರರು ಸಮಸ್ಯೆಗಳಿಂದಾಗಿ ನರಳುವಂತಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುವ ಕೆಲಸವಾಗುತ್ತಿದೆ ಎಂದರು.

*ಹೇಳಿಕೆ- 1

ಬಗರ್‌ಹುಕುಂ ಸಮಸ್ಯೆ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಕಳ್ಳರಂತೆ ನೋಡಿಕೊಂಡು ರೈತ ವಿರೋಧಿ ಚಟುವಟಿಕೆಗಳನ್ನು ನಡೆಸಿ, ರೈತರನ್ನು ಮೂಲೆಗುಂಪು ಮಾಡುವಂತಹ ಕೆಲಸವನ್ನು ಮಾಡುತ್ತಿರುವುದನ್ನು ಖಂಡಿಸಿ ಅಹೋರಾತ್ರಿ ಧರಣಿಯನ್ನು ಹಮ್ಮಿಕೊಂಡಿದ್ದೇವೆ.

- ಭೋಗಮಲ್ಲೇಶ್, ತಾ. ರೈತ ಸಂಘದ ಅಧ್ಯಕ್ಷ

*ಹೇಳಿಕೆ-2

ಒಂದೂವರೆ ಶಾಸಕರು ಸಮಸ್ಯೆಗಳ ಬಗ್ಗೆ ಚರ್ಚಿಸಲು ಸೌಜನ್ಯಕ್ಕೂ ರೈತರೊಂದಿಗೆ ಒಂದು ಸಭೆ ಕರೆದಿಲ್ಲ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು ತಹಸೀಲ್ದಾರ್‌ ಪ್ರತಿಭಟನಾ ಸ್ಥಳದಲ್ಲಿ ಹಾಜರಿರದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಂದುವರಿಸುತ್ತೇವೆ.

- ಬಳ್ಳೂರು ಸ್ವಾಮಿಗೌಡ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ