ಸಾರಾಂಶ
ಇಲ್ಲಿನ ಹಳೆಯ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟ ವೇದಿಕೆಯ ಸದಸ್ಯರು ರಾಯಲ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಬಳ್ಳಾರಿ: ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಗ್ಗೆ ಹಗುರವಾಗಿ ಮಾತನಾಡಿರುವ ಉತ್ತರಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಕನ್ನಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ವೇದಿಕೆಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯನವರ ವಿರುದ್ಧ ಟೀಕೆ ಮಾಡಿರುವ ಅನಂತಕುಮಾರ ಹೆಗಡೆ ಅವರು ಸಾಂವಿಧಾನಿಕ ಹುದ್ದೆಯನ್ನು ಲೆಕ್ಕಿಸದೆ ಏಕವಚನದಲ್ಲಿ ಸಂಬೋಧಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಅವಾಚ್ಯ ಶಬ್ದಗಳ ನಿಂದೆಯನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ಅನಂತಕುಮಾರ ಹೆಗಡೆ ಅವರು ಈ ಹಿಂದೆ ಸಹ ಅನೇಕ ಬಾರಿ ಅನೇಕ ನಾಯಕರ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡಿದ್ದಾರೆ. ಕೂಡಲೇ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮವಾಗಬೇಕು. ಮುಂದೆ ಯಾರ ಬಗ್ಗೆಯೂ ಮಾತನಾಡಿದಂತೆ ಶಿಸ್ತುಕ್ರಮ ಜರುಗಿಸಬೇಕು. ಕೂಡಲೇ ಬಂಧನಕ್ಕೆ ಗೃಹ ಸಚಿವರು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.ಇಲ್ಲಿನ ಹಳೆಯ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟ ವೇದಿಕೆಯ ಸದಸ್ಯರು ರಾಯಲ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ವೇದಿಕೆ ಗೌರವಾಧ್ಯಕ್ಷ ರವಿ ಕಾರಮಂಜಿ, ಜಿಲ್ಲಾಧ್ಯಕ್ಷ ಬಟ್ಟಿ ಎರಿಸ್ವಾಮಿ, ಜಿಲ್ಲಾ ಕಾರ್ಯಾಧ್ಯಕ್ಷ ಕೆ. ಶಿವಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಸುಂಡಿ ಪರಮೇಶ್, ಹಿರಿಯ ಉಪಾಧ್ಯಕ್ಷ ಕೆ.ಬಿ. ವಿರುಪಾಕ್ಷಿ, ಎಂ.ಜಿ. ಶ್ರೀಕಾಂತ್, ಕೆ. ಲಲಿತಾ, ಕೆ. ಸೂರ್ಯದೇವ, ಸಂಘಟನಾ ಕಾರ್ಯದರ್ಶಿ ಬೆಳ್ಳಿಕಟ್ಟೆಪ್ಪ, ಕೆ. ನಾಗರಾಜ ಶಂಕರಬಂಡೆ ಸೇರಿದಂತೆ ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಪ್ರಮುಖರು ಭಾಗವಹಿಸಿದ್ದರು.