ಸಾರಾಂಶ
ಹಾವೇರಿ: ಕೋಲ್ಕತಾದ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ವಿವಿಧ ಸಂಘಟನೆಗಳುಳಿಂದ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಾಯಿತು. ಹತ್ಯಾಚಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಹಾವೇರಿ, ರಾಣಿಬೆನ್ನೂರು, ಹಾನಗಲ್ಲ, ಬ್ಯಾಡಗಿ, ಶಿಗ್ಗಾಂವಿ ಸೇರಿದಂತೆ ಜಿಲ್ಲೆಯಲ್ಲಿ ವೈದ್ಯ ವಿದ್ಯಾರ್ಥಿನಿ ಹತ್ಯೆ, ಅತ್ಯಾಚಾರ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಯಿತು. ನಗರದಲ್ಲಿ ಶನಿವಾರ ಎಬಿವಿಪಿ, ಎಸ್‌ಎಫ್‌ಐ, ರಾಜ್ಯ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘ ಮುಂತಾದ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಬಂದ್ ಮಾಡಿ ಹೋರಾಟ ಬೆಂಬಲಿಸಿದರು.ಇಲ್ಲಿಯ ಜಿಲ್ಲಾಸ್ಪತ್ರೆ ಆವರಣದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘಟನೆಗಳ ಕಾರ್ಯಕರ್ತರು, ವಿದ್ಯಾರ್ಥಿಗಳು ಕೆಲಕಾಲ ರಸ್ತೆ ತಡೆದು ವಾಹನಗಳ ಸಂಚಾರ ಬಂದ್ ಮಾಡಿದರು. ಅತ್ಯಾಚಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಯುವತಿಯರು, ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಆಗ್ರಹಿಸಿದರು. ಕೋಲ್ಕತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ತರಬೇತಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣದಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಇದಕ್ಕೆ ಮೂಲ ಕಾರಣ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ. ಈ ಹಿಂದೆ ನಡೆದಿದ್ದ ಇಂತಹ ಹಲವು ಪ್ರಕರಣದ ಆರೋಪಿಗಳಿಗೆ ಮಮತಾ ಬ್ಯಾನರ್ಜಿ ಸರ್ಕಾರ ಕಠಿಣ ಶಿಕ್ಷೆ ವಿಧಿಸದೇ ನಿರ್ಲಕ್ಷ್ಯ ವಿಧಿಸಿದ್ದೇ ಈ ಘಟನೆ ನಡೆಯಲು ಕಾರಣವಾಗಿದೆ. ಇಂತಹ ಘಟನೆಗಳನ್ನು ಎಂದಿಗೂ ಸಹಿಸುವುದಿಲ್ಲ. ಕೂಡಲೇ ಆರೋಪಿಗಳೆಲ್ಲರನ್ನೂ ಬಂಧಿಸಿ, ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ರಾಜ್ಯ ಸರ್ಕಾರದ ವೈದ್ಯಕೀಯ ಕಾಲೇಜ್‌ನಲ್ಲಿ ಘಟನೆ ನಡೆದಿದೆ. ಅಲ್ಲಿ ಸಿಸಿಟಿವಿ ಕ್ಯಾಮರಾಗಳಿಲ್ಲ, ಭದ್ರತಾ ಕ್ರಮಗಳಿಲ್ಲ. ಯಾರೂ ಹೊಣೆಗಾರರಲ್ಲ ಎಂದರೆ ಆ ರಾಜ್ಯದ ವ್ಯವಸ್ಥೆ ಎಲ್ಲಿಗೆ ತಲುಪಿದೆ. ಆರಂಭದಲ್ಲಿ ಇದು ಆತ್ಮಹತ್ಯೆ ಎಂದು ತಪ್ಪು ದಾರಿಗೆ ಎಳೆಯುವ ಯತ್ನ ನಡೆಯಿತು. ವಿದ್ಯಾರ್ಥಿಗಳ ಪ್ರತಿಭಟನೆ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ದೇಶದಲ್ಲಿ ಎಲ್ಲಿಯೂ ಇಂತಹ ಘೋರ ಘಟನೆಗಳು ಜರುಗದಂತೆ ಸರ್ಕಾರ ಸೂಕ್ತ ಕ್ರಮ, ಕಾನೂನು ಜಾರಿಗೊಳಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು. ಅಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಅಶೋಕ ಬೀಮನಹಳ್ಳಿ, ಡಾ.ಚನ್ನಬಸಯ್ಯ ವಿರಕ್ತಮಠ, ಡಾ.ಪ್ರಭಾಕರ ಕುಂದೂರ, ಡಾ.ನಿರಂಜನ ಬಣಕಾರ, ಎಬಿವಿಪಿ ಜಿಲ್ಲಾ ಸಂಚಾಲಕ ಅಭಿಷೇಕ ದೊಡ್ಡಮನಿ, ನಗರ ಕಾರ್ಯದರ್ಶಿ ನಾಗರಾಜ ಪುರವಂತಿಗೌಡ್ರ, ತಾಲೂಕು ಸಂಚಾಲಕ ನವೀನ ಜಿ.ಕೆ., ಮಾಧ್ಯಮ ಪ್ರಮುಖ ಸಂತೋಷ ಯೋಗೀಶ, ಎಸ್‌ಎಫ್‌ಐ ಸಹ ಕಾರ್ಯದರ್ಶಿ ಬಸವರಾಜ ಎಸ್., ಸೇರಿದಂತೆ ನೂರಾರು ವಿದ್ಯಾರ್ಥಿಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿ ಪಾಲ್ಗೊಂಡಿದ್ದರು.
ಒಪಿಡಿ ಸೇವೆ ಬಂದ್, ರೋಗಿಗಳ ಪರದಾಟ: ಕೋಲ್ಕತ್ತಾದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಜಿಲ್ಲಾದ್ಯಂತ ವೈದ್ಯರು ಓಪಿಡಿ ಸೇವೆ ಬಂದ್ ಮಾಡಿ ಶನಿವಾರ ಪ್ರತಿಭಟಿಸಿದ್ದರಿಂದ ರೋಗಿಗಳು ಪರದಾಡುವಂತಾಯಿತು. ಭಾರತೀಯ ವೈದ್ಯಕೀಯ ಸಂಘದ ಕರೆ ಮೇರೆಗೆ ಜಿಲ್ಲೆಯ ವೈದ್ಯರು ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ವಿಭಾಗ ಬಂದ್ ಮಾಡಿ, ಕೈಗೆ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು. ವೈದ್ಯರ ಪ್ರತಿಭಟನೆ ಪರಿಣಾಮ ರೋಗಿಗಳು ಮತ್ತು ಅವರ ಸಂಬಂಧಿಕರು ಸೂಕ್ತ ಚಿಕಿತ್ಸೆ ಸಿಗದೆ ಪರದಾಡಿದರು. ವೈದ್ಯರ ಪ್ರತಿಭಟನೆಯ ಮಾಹಿತಿ ಇಲ್ಲದೇ ಬೆಳಗ್ಗೆಯೇ ನಗರದ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಆಗಮಿಸಿದ್ದ ರೋಗಿಗಳು ಚಿಕಿತ್ಸೆ ಸಿಗದೇ ವಾಪಸಾದರು. ಆದರೆ, ತುರ್ತು ಚಿಕಿತ್ಸೆಗಳನ್ನು ವೈದ್ಯರು ನೀಡಿದ್ದರಿಂದ ಯಾವುದೇ ಸಮಸ್ಯೆ ಎದುರಾಗಲಿಲ್ಲ.