ಸಾರಾಂಶ
ಸಂಘಟನೆಯ ಗ್ರಾಮ ಘಟಕದ ಕಾರ್ಯದರ್ಶಿ ಲೋಕೇಶ್ ಮಾತನಾಡಿ, ತೋರಣಗಲ್ಲು ಕೈಗಾರಿಕಾ ಪ್ರದೇಶವಾಗಿದೆ.
ಸಂಡೂರು: ತಾಲೂಕಿನ ತೋರಣಗಲ್ಲು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿನ ವೈದ್ಯರ ನಿರ್ಲಕ್ಷ್ಯ ಖಂಡಿಸಿ, ರೋಗಿಗಳಿಗೆ ಅಗತ್ಯ ಸೇವೆ ಒದಗಿಸಲು ಒತ್ತಾಯಿಸಿ ಡಿವೈಎಫ್‌ಐ ಸಂಘಟನೆ ಮುಖಂಡರು ಶನಿವಾರ ಆರೋಗ್ಯ ಕೇಂದ್ರದ ಮುಂಭಾಗ ಪ್ರತಿಭಟನೆ ನಡೆಸಿದರು.
ಸಂಘಟನೆಯ ಗ್ರಾಮ ಘಟಕದ ಕಾರ್ಯದರ್ಶಿ ಲೋಕೇಶ್ ಮಾತನಾಡಿ, ತೋರಣಗಲ್ಲು ಕೈಗಾರಿಕಾ ಪ್ರದೇಶವಾಗಿದ್ದು, ಇಲ್ಲಿ ಪ್ರತಿನಿತ್ಯ ಹಲವು ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ಆದರೆ, ಆಸ್ಪತ್ರೆಯ ವೈದ್ಯರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಗಾಯಗೊಂಡ ರೋಗಿಗಳು ಆಸ್ಪತ್ರೆಗೆ ಬಂದರೆ, ಗಾಯಕ್ಕೆ ಕಟ್ಟುವ ಬಟ್ಟೆ ಇಲ್ಲ ಎಂದು ಹೇಳಿ, ನಾಳೆ, ನಾಡಿದ್ದು ಬನ್ನಿ ಎಂದು ಹೇಳುತ್ತಿದ್ದಾರೆ ಎಂದು ದೂರಿದರು.ವೈದ್ಯರು ಸಮಯಕ್ಕೆ ಸರಿಯಾಗಿ ಬರಬೇಕು. ಸಮಯಕ್ಕೆ ಸರಿಯಾಗಿ ಹಾಜರಾಗದ ವೈದ್ಯರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಸಿಬ್ಬಂದಿಯಲ್ಲಿ ಒಬ್ಬರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಬೇಕೆಂಬುದು ಒತ್ತಾಯಿಸಿದರು.
ಸಂಘಟನೆಯ ತಾಲೂಕು ಘಟಕದ ಉಪಾಧ್ಯಕ್ಷ ಅಕ್ಷಯ, ಕಾರ್ಯದರ್ಶಿ ನಾಗಭೂಷಣ, ಸಿಪಿಐಎಂ ಪಕ್ಷದ ಕಾರ್ಯದರ್ಶಿ ಎ.ಸ್ವಾಮಿ, ಅಂಬೇಡ್ಕರ್ ಸಂಘದ ಮುಖಂಡರಾದ ನಾಗರಾಜ್ ಕುರೆಕುಪ್ಪ, ರಾಮು, ಎಚ್.ಪಂಪಯ್ಯ, ಅಂಜಿನಪ್ಪ, ವೇಬಕುಮಾರಿ, ಅಂಜಿನಮ್ಮ ಉಪಸ್ಥಿತರಿದ್ದರು.