ಹೊಳಲು ಗ್ರಾಮದ ಲಕ್ಷ್ಮಮ್ಮ ಕೋಂ ಸಿದ್ದಯ್ಯ ಅವರಿಗೆ ಸೇರಿದ್ದ ಮನೆಯನ್ನು ನಾಡಕಚೇರಿಗಾಗಿ 2022-23, 2023-24 ಸಾಲಿನಿಂದ ಬಾಡಿಗೆಗೆ ಪಡೆದಿದ್ದು, ನಂತರ ನಾಡ ಕಚೇರಿಯನ್ನು ಸ್ಥಳಾಂತರ ಮಾಡಲಾಗಿದೆ. ಆದರೆ, ಸದರಿ ಮನೆಗೆ ಬಣ್ಣ ಮಾಡಿಸಬೇಕಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಹೊಳಲು ನಾಡ ಕಚೇರಿಗಾಗಿ ಮನೆ ಬಾಡಿಗೆ ಪಡೆದು ಸುಮಾರು ಒಂದು ಲಕ್ಷ ರು. ಬಾಡಿಗೆ ಹಾಗೂ ಇತರೆ ಖರ್ಚು ವೆಚ್ಚಗಳನ್ನು ಪಾವತಿಸದ ಹಿನ್ನೆಲೆಯಲ್ಲಿ ರೈತರು ಎತ್ತಿನಗಾಡಿ ಹಾಗೂ ಜಾನುವಾರುಗಳೊಂದಿಗೆ ತಾಲೂಕು ಕಚೇರಿಗೆ ಆಗಮಿಸಿ ಗುರುವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಲಕ್ಷ್ಮಮ್ಮ ಕೋಂ ಸಿದ್ದಯ್ಯ ಅವರಿಗೆ ಸೇರಿದ್ದ ಮನೆಯನ್ನು ನಾಡಕಚೇರಿಗಾಗಿ 2022-23, 2023-24 ಸಾಲಿನಿಂದ ಬಾಡಿಗೆಗೆ ಪಡೆದಿದ್ದು, ನಂತರ ನಾಡ ಕಚೇರಿಯನ್ನು ಸ್ಥಳಾಂತರ ಮಾಡಲಾಗಿದೆ. ಆದರೆ, ಸದರಿ ಮನೆಗೆ ಬಣ್ಣ ಮಾಡಿಸಬೇಕಾಗಿದೆ. ಬಣ್ಣದ ಅಂದಾಜು ವೆಚ್ಚ 1 ಲಕ್ಷ ರು. ತಗುಲಲಿದೆ. ಮನೆ ಮುಖ್ಯ ಬಾಗಿಲು ಮುರಿದಿದ್ದು ಇದರ ವೆಚ್ಚ 20,000 ರು. ಮತ್ತು ಇತರೆ ಸಣ್ಣ ಪುಟ್ಟ ರಿಪೇರಿ ವೆಚ್ಚ 10,000 ರು. ಗಳಾಗಿವೆ. ವಿದ್ಯುತ್ ಬಿಲ್ ಪಾವತಿಸಬೇಕಾಗಿದೆ. ಈ ಬಗ್ಗೆ ಮಾರ್ಚ್ 2024ರಲ್ಲೇ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಗಿದ್ದರೂ ಇದವರೆಗೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ ರೈತರಾದ ರವಿ, ಹೊಳಲು ಶಿವು, ಕೋಣನಹಳ್ಳಿ ಜವರೇಗೌಡ ಹಾಗೂ ಕೊಮ್ಮೇರಹಳ್ಳಿ ನಾಗೇಶ್ ಭಾಗವಹಿಸಿದ್ದರು.

ಸರ್ಕಾರಿ ಶಾಲೆಗಳ ಉಳಿವಿಗಾಗಿ ಉಪವಾಸ ಸತ್ಯಾಗ್ರಹ

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ರಾಜ್ಯ ರೈತಸಂಘ ಹಾಗೂ ಎಸ್‌ಡಿಎಂಸಿ ಸಂಘದಿಂದ ಸರ್ಕಾರಿ ಶಾಲೆಗಳ ಉಳಿವಿಗಾಗಿ ಡಿ.೧೩ ರಿಂದ ೧೫ರವರೆಗೆ ಮೂರು ದಿನಗಳ ಕಾಲ ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಹೇಳಿದರು.

ಸಂವಿಧಾನದಲ್ಲಿ ಆರ್ಟಿಕಲ್ ೨೧ಎ ಅಡಿಯಲ್ಲಿ ನೀಡಲಾಗಿರುವ ಗುಣಮಟ್ಟದ ಉಚಿತ ಶಿಕ್ಷಣ, ಮೂಲಭೂತ ಹಕ್ಕುಗಳನ್ನು ಸರ್ಕಾರ ಜನಸಾಮಾನ್ಯರಿಗೆ ಕೊಟ್ಟೇ ಇಲ್ಲ. ಶಿಕ್ಷಣ ಬಹುತೇಕ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಾಜಕಾರಣಿಗಳ ಕುಟುಂಬದವರ ಹಿಡಿತದಲ್ಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಮ್ಯಾಗ್ನೆಟ್ ಹಾಗೂ ಕೆಪಿಎಸ್ ಶಾಲೆಗಳು ಎಂಬ ಹೆಸರಿನಡಿ ಸುಮಾರು ೨೫ ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ಶಾಶ್ವತವಾಗಿ ಸರ್ಕಾರಿ ಶಾಲೆಗಳಿಗೆ ಬೀಗ ಹಾಕುವುದು ಸರ್ಕಾರದ ಉದ್ದೇಶವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಪರ ದಲ್ಲಾಳಿಯಾಗಿ ಸರ್ಕಾರ ಸಮಾಜವಿರೋಧಿ, ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಏಕರೂಪ ಶಿಕ್ಷಣ ನೀತಿಯನ್ನು ಜಾರಿಗೆ ತಂದು ಇವತ್ತಿನ ದಿನ ರಾಜಕಾರಣಿಗಳು ಹಾಗೂ ಸರ್ಕಾರಿ ನೌಕರರ ಮಕ್ಕಳಿಗೆ ಸಿಗುತ್ತಿರುವ ಗುಣಮಟ್ಟದ ಶಿಕ್ಷಣ ಬಡವರ ಮಕ್ಕಳಿಗೂ ಸಿಗಬೇಕು ಎಂಬ ಬೇಡಿಕೆಯೊಂದಿಗೆ ಉಪವಾಸ ಸತ್ಯಾಗ್ರಹ ನಡೆಸಲಾಗುತತಿದೆ ಎಂದು ನುಡಿದರು.

ಪ್ರಮುಖ ಬೇಡಿಕೆಗಳು:

ರಾಜ್ಯದ ೪೧,೯೦೫ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿಯಿಂದ ೫ನೇ ತರಗತಿಯವರೆಗೆ ದ್ವಿಭಾಷೆಯಲ್ಲಿ ಸಿಬಿಎಸ್‌ಸಿ ಶಿಕ್ಷಣ, ಮೂಲ ಸೌಕರ್ಯ ಒದಗಿಸುವುದು. ರಾಜ್ಯದ ಪ್ರತಿ ಗ್ರಾಪಂನಲ್ಲೂ ೬ ರಿಂದ ೧೨ನೇ ತರತಿಯವರೆಗೆ ನವೋದಯ ಮಾದರಿ ಸಿಬಿಎಸ್‌ಸಿ ವಸತಿ ಶಾಲಾ ಶಿಕ್ಷಣ ನೀಡುವುದು. ಸರ್ಕಾರಕ್ಕೆ ಯೋಗ್ಯತೆ ಇಲ್ಲವಾದರೆ ಶಿಕ್ಷಣ ಇಲಾಖೆಯ ಅನುದಾನವನ್ನು ನೇರವಾಗಿ ಪ್ರತಿಯೊಂದು ಸರ್ಕಾರಿ ಶಾಲಯ ಎಸ್‌ಡಿಎಂಸಿ ಖಾತೆಗಳಿಗೆ ವರ್ಗಾಯಿಸಿದರೆ ಹಾಲಿನ ಡೈರಿ ರೀತಿ ಎಸ್‌ಡಿಎಂಸಿಯವರೇ ಇಕ್ಷಕರನ್ನು ನೇಮಕ ಮಾಡಿ, ಮೂಲಸೌಕರ್ಯ ಒದಗಿಸಿ ಶಾಲೆಗಳನ್ನು ಮುನ್ನಡೆಸಲಿದ್ದಾರೆ

ಗೋಷ್ಠಿಯಲ್ಲಿ ಶಿವಳ್ಳಿ ಚಂದ್ರಶೇಖರ್, ಹಲ್ಲೇಗೆರೆ ಹರೀಶ್, ಸಂತೋಷ್, ಅನಿಲ್‌ಗೌಡ, ಕೂರ್ಗಳ್ಳಿ ರೇವಣ್ಣ ಇತರರಿದ್ದರು.