ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಖಂಡಿಸಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಕಾರ್ಯಕರ್ತರು ಬಳ್ಳಾರಿ ನಗರದ ಹಳೆ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿ: ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಖಂಡಿಸಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಕಾರ್ಯಕರ್ತರು ನಗರದ ಹಳೆ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯೆ ಡಿ. ನಾಗಲಕ್ಷ್ಮೀ ಮಾತನಾಡಿ, ಇಂಧನ ಬೆಲೆ ಏರಿಕೆಯು ಬೇರೆಲ್ಲ ಅವಶ್ಯಕ ವಸ್ತುಗಳನ್ನು ದುಬಾರಿಗೊಳಿಸಿ, ಹಣದುಬ್ಬರಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದರು. ಅಮೆರಿಕ- ಇಸ್ರೇಲ್ ಕೂಟವು ಇರಾನ್ ಮೇಲೆ ನಡೆಸುತ್ತಿರುವ ಯುದ್ಧವೇ ಈ ಬೆಲೆ ಏರಿಕೆಗೆ ಕಾರಣ ಎಂದು ಕೇಂದ್ರ ಬಿಜೆಪಿ ಸರ್ಕಾರವು ಸಮರ್ಥಿಸಿಕೊಳ್ಳುತ್ತಿದೆ. ಆದರೆ ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುವ ಅವಕಾಶವನ್ನು ಅಮೆರಿಕದ ಒತ್ತಡಕ್ಕೆ ಮಣಿದು ಕೈಚೆಲ್ಲಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಅರ್ಧದಷ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಗಳೇ ಇವೆ. ಹೀಗಾಗಿ ತಕ್ಷಣವೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆಗಳನ್ನು ಕಡಿತಗೊಳಿಸಬೇಕು. ತೈಲ ಕಂಪನಿಗಳ ಲಾಭಕ್ಕಾಗಿ, ದೇಶದೊಳಗೆಯೇ ಶುದ್ಧೀಕರಣ ಮಾಡಿ ಉತ್ಪಾದಿಸುವ ಪೆಟ್ರೋಲ್ ಮತ್ತು ಡೀಸೆಲ್‌ಗೆ ಜಾಗತಿಕ ದರಗಳನ್ನು ನಿಗದಿ ಮಾಡುವ ನೀತಿಯನ್ನು ಕೈಬಿಡಬೇಕು. ಈ ಯುದ್ಧವನ್ನು ನಿಲ್ಲಿಸುವಂತೆ, ಬೇರೆ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಮೂಗು ತೂರಿಸದಂತೆ ಅಮೆರಿಕದ ಸಾಮ್ರಾಜ್ಯಶಾಹಿಗಳ ಮೇಲೆ ಭಾರತವು ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಸಮಿತಿ ಸದಸ್ಯ ಆರ್. ಸೋಮಶೇಖರ ಗೌಡ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಗುಜರಾತ್ ಮಾದರಿ ಸರ್ಕಾರ ಬರುತ್ತದೆ, ಅಚ್ಛೇ ದಿನ್ ಬರುತ್ತದೆ ಎಂದು ಹೇಳಿ ಜನರಿಗೆ ಮೋಸ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆ ಇಳಿಕೆ ಕಂಡರೂ ಅದರ ಲಾಭ ಗ್ರಾಹಕರಿಗೆ ಸಿಗುತ್ತಿಲ್ಲ. ಬದಲಿಗೆ ಬೆಲೆ ಏರಿಕೆ ಬರೆ ಹಾಕಲಾಗುತ್ತಿದೆ. ಆದರೆ ತೈಲ ಕಂಪನಿಗಳು ಲಕ್ಷಾಂತರ ಕೋಟಿ ಲಾಭ ಮಾಡಿಕೊಂಡಿವೆ. ಈ ಹಿಂದಿನ ಕಾಂಗ್ರೆಸ್‌ನ ಬೆಲೆ ಏರಿಕೆ ನೀತಿಯನ್ನೇ ಬಿಜೆಪಿ ಮುಂದುವರಿಸಿದೆ. ಈ ಎರಡು ಪಕ್ಷಗಳು ಜನ ವಿರೋಧಿಯಾಗಿದ್ದು, ಕಾರ್ಪೊರೇಟ್ ಕಂಪನಿಗಳ ಏಜೆಂಟ್ ಆಗಿವೆ. ಈ ಹಿನ್ನೆಲೆಯಲ್ಲಿ ಜನ ಹೋರಾಟ ತೀವ್ರಗೊಳಿಸಬೇಕು. ಇದೊಂದೇ ಪರಿಹಾರ ಎಂದು ತಿಳಿಸಿದರು.
ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಡಾ. ಪ್ರಮೋದ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಪಕ್ಷದ ಜಿಲ್ಲಾ ಪ್ರಮುಖರಾದ ಮಂಜುಳಾ, ಎ. ದೇವದಾಸ್, ಶಾಂತಾ, ಗೋವಿಂದ್, ಈಶ್ವರಿ, ನಿವೃತ್ತ ಉಪನ್ಯಾಸಕ ನರಸಣ್ಣ, ಪಕ್ಷದ ಕಾರ್ಯಕರ್ತರಾದ ಹನುಮಪ್ಪ, ಪಂಪಾಪತಿ, ಸೌಮ್ಯಾ, ಅಭಿಲಾಷ, ಶಾಂತಿ, ವಿದ್ಯಾ ಮತ್ತಿತರರು ಭಾಗವಹಿಸಿದ್ದರು.