ಪ್ರೇರಣಾ ಸಂಸ್ಥೆ ವಿರುದ್ಧ ನ. 12ರಂದು ಪ್ರತಿಭಟನೆ

| Published : Nov 11 2025, 02:30 AM IST

ಸಾರಾಂಶ

ಸಂಸದ ರಾಜಶೇಖರ ಹಿಟ್ನಾಳ ಒಡೆತನದ ಪ್ರೇರಣಾ ಸಂಸ್ಥೆಯ ವಿರುದ್ಧ ನ. 12ರಂದು ಬೃಹತ್ ಪ್ರತಿಭಟನೆ ನಡೆಸಲು ಕೊಪ್ಪಳ ತಾಲೂಕು ಗುತ್ತಿಗೆದಾರರ ಸಂಘದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಕೊಪ್ಪಳ: ಸಂಸದ ರಾಜಶೇಖರ ಹಿಟ್ನಾಳ ಒಡೆತನದ ಪ್ರೇರಣಾ ಸಂಸ್ಥೆಯ ವಿರುದ್ಧ ನ. 12ರಂದು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

ಕೊಪ್ಪಳ ತಾಲೂಕು ಗುತ್ತಿಗೆದಾರರ ಸಂಘದ ಸಭೆ ಕೊಪ್ಪಳ ನಗರದ ಐಬಿಯಲ್ಲಿ ಅಧ್ಯಕ್ಷ ಕೃಷ್ಣ ಎಂ. ಇಟ್ಟಂಗಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ ಅವರ ಉಪಸ್ಥಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಹೋರಾಟದಲ್ಲಿ ಗುತ್ತಿಗೆದಾರರು ತಮ್ಮ ವಾಹನಗಳೊಂದಿಗೆ ಭಾಗವಹಿಸುವಂತೆ ಕೋರಲಾಗಿದೆ.

ಸಭೆಯಲ್ಲಿ ಕೊಪ್ಪಳ ಜಿಲ್ಲಾ ಗುತ್ತೇದಾರರ ಸಂಘ, ಕೊಪ್ಪಳ ಜಿಲ್ಲಾ ಸ್ಟೋನ್ ಕ್ರಷರ್ ಅಸೋಸಿಯೇಶನ್ ಅವರು ಪ್ರೇರಣಾ ಕನ್‌ಸ್ಟ್ರಕ್ಷನ್‌ ಎಂಬ ಎಜೆನ್ಸಿ ಮೂಲಕ ಜೆಲ್ಲಿ ಸರಬರಾಜು ಮಾಡುವದನ್ನು ಖಂಡಿಸಲಾಯಿತು. ಪ್ಯಾಕೆಜ್ ಟೆಂಡರ್ ಪದ್ಧತಿ ರದ್ದುಗೊಳಿಸುವ ಕುರಿತು ಜಿಲ್ಲಾಧಿಕಾರಿಗೆ ದೂರು ಸಲ್ಲಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.

ಹೊರ ರಾಜ್ಯದ ಹಾಗೂ ಹೊರ ಜಿಲ್ಲೆಗಳ ಗುತ್ತಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದು, ಅದನ್ನು ನಿರ್ಬಂಧಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಪ್ರತಿಭಟನಾ ಮೆರವಣಿಗೆಯಲ್ಲಿ ಗುತ್ತಿಗೆದಾರರು ವಾಹನಗಳೊಂದಿಗೆ ಭಾಗವಹಿಸಿ, ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಹಮ್ಮಿಕೊಂಡಿರುವ ಒಂದು ದಿನದ ಸಾಂಕೇತಿಕ ಧರಣಿಯಲ್ಲಿ ಕೊಪ್ಪಳ ತಾಲೂಕು ವತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಲು ಸಭೆ ಸರ್ವಾನುಮತದ ನಿರ್ಣಯ ಕೈಗೊಂಡಿತು.

ಬೇಡಿಕೆ ಈಡೇರುವ ವರೆಗೆ ಎಲ್ಲ ಗುತ್ತಿಗೆದಾರರು, ಲ್ಯಾಂಡ್ ಆರ್ಮಿ ಮತ್ತು ನಿರ್ಮಿತಿ ಕೇಂದ್ರದವರು ಸಹಿತ ಕಾಮಗಾರಿ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯಲ್ಲಿ ಜಿಲ್ಲಾ ಗುತ್ತೇದಾರರ ಸಂಘದ ಕಾರ್ಯದರ್ಶಿ ದೇವಪ್ಪ ಅರಕೇರಿ, ಕೊಪ್ಪಳ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಧ್ಯಕ್ಷ ಹನುಮೇಶ ಕಡೇಮನಿ, ಹಿರಿಯ ಗುತ್ತೇದಾರರಾದ ಬಸವರಾಜ ಪುರದ, ಮಲ್ಲಯ ಎಲ್. ಎಂ., ಅಪ್ಜಲ್ ಪಟೇಲ್, ಇಬ್ರಾಹಿಂ ಅಡ್ಡೇವಾಲೆ, ಖಾಜಾಹುಸೇನ ಗದಗ, ಮಹಾದೇವಪ್ಪ ಇದ್ದರು.