ಸಾರಾಂಶ
ದ್ಯಾರ್ಥಿಗಳು ಹೆಬ್ಬಾಳದ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಖಾಸಗಿಯವರಿಗೆ ಕೃಷಿ ಕೋರ್ಸ್ ಆರಂಭಿಸಲು ಅನುಮತಿ ನೀಡಲು ಮುಂದಾಗಿದೆ ಎಂದು ಆರೋಪಿಸಿ ವಿವಿಯ ವಿದ್ಯಾರ್ಥಿಗಳು ಹೆಬ್ಬಾಳದ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ರಾಜ್ಯ ಕೃಷಿ ಮತ್ತು ತೋಟಗಾರಿಕೆ ವಿವಿಗಳ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ‘ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಕೃಷಿ ಕೋರ್ಸ್‌ಗಳನ್ನು ಪ್ರಾರಂಭಿಸಲು ಅವಕಾಶ ನೀಡಬಾರದು. ಈಗಾಗಲೇ ಕೃಷಿ ಪದವೀಧರರಿಗೆ ಉದ್ಯೋಗ ಸಿಗುತ್ತಿಲ್ಲ. ಒಂದೊಮ್ಮೆ ಖಾಸಗಿಯವರಿಗೆ ಅವಕಾಶ ನೀಡಿದರೆ ಮತ್ತಷ್ಟು ಸಮಸ್ಯೆ ಉಂಟಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿಯವರು ಕೃಷಿ ಕೋರ್ಸ್ ಪ್ರಾರಂಭಿಸಿದರೆ ರೈತರ ಮಕ್ಕಳಿಗೆ ಅನ್ಯಾಯವಾಗುತ್ತದೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನಿಡುವುದಿಲ್ಲ. ಸ್ಪಷ್ಟ ಭರವಸೆ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು,ಅಧಿಕಾರಿಗಳ ಜೊತೆ ಮಾತುಕತೆ ನಡಸಲು ವ್ಯವಸ್ಥೆ ಮಾಡುವುದಾಗಿ ಹೇಳಿ ವಿದ್ಯಾರ್ಥಿಗಳ ಮನವೊಲಿಸಿದರು.ವಿದ್ಯಾರ್ಥಿಗಳ ಪ್ರತಿಭಟನೆ ಏಕೆ ?
ರಾಜ್ಯದಲ್ಲಿ ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಹೊರತುಪಡಿಸಿ ಖಾಸಗಿಯವರಿಗೆ ಕೃಷಿ ಕೋರ್ಸ್‌ಗಳನ್ನು ಆರಂಭಿಸಲು ಇಲ್ಲಿಯವರೆಗೂ ಅನುಮತಿ ನೀಡಿಲ್ಲ. ಜು.15 ರಂದು ನಡೆದ ವಿವಿಯ ವ್ಯವಸ್ಥಾಪನಾ ಮಂಡಳಿ ಸಭೆಯಲ್ಲಿ ಖಾಸಗಿಯವರಿಗೆ ಅವಕಾಶ ನೀಡಿದರೆ ಹೇಗೆ ಎಂದು ಚರ್ಚೆ ನಡೆದಿದೆ. ಇದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಖಾಸಗಿಯವರು ಕೃಷಿ ಕೋರ್ಸ್‌ಗಳನ್ನು ಪ್ರಾರಂಭಿಸಲು ಅವಕಾಶವಿದೆ. ರಾಜ್ಯದಲ್ಲಿ ಸಿಇಟಿ ಮೂಲಕ ಬಿಎಸ್ಸಿ ಕೃಷಿ ಕೋರ್ಸ್ ಸೀಟ್ ಸಿಗದ ಕೆಲವರು ಆಂಧ್ರದ ಅನಂತಪುರ, ತಮಿಳುನಾಡಿನ ಹೊಸೂರು ಸಮೀಪ ಅಭ್ಯಾಸ ನಡೆಸುತ್ತಾರೆ. ಇದಕ್ಕೆ ನಮ್ಮಲ್ಲಿ ಯಾವುದೇ ಮಾನ್ಯತೆ ಇಲ್ಲ. ಆದರೆ ಅಲ್ಲಿ ಬಿಎಸ್ಸಿ ಕೃಷಿ ಮಾಡಿದವರು ರಾಜ್ಯದಲ್ಲಿ ನಡೆಯುವ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎಂಎಸ್ಸಿ ಕೃಷಿಗೆ ಪ್ರವೇಶ ಪಡೆಯಬಹುದು. ಈ ಎಂಎಸ್ಸಿ ಕೃಷಿ ಪದವಿಗೆ ಮಾನ್ಯತೆ ಇದೆ. ಆದ್ದರಿಂದ ರಾಜ್ಯದಲ್ಲೇ ಖಾಸಗಿಯವರಿಗೆ ಕೃಷಿ ಕೋರ್ಸ್ ನೀಡಲು ಆಡಳಿತ ಮಂಡಳಿಯ ಕೆಲವರು ಹುನ್ನಾರ ನಡೆಸಿದ್ದಾರೆ ಎಂಬುದು ವಿದ್ಯಾರ್ಥಿಗಳ ಆರೋಪವಾಗಿದೆ.