ಸಾರಾಂಶ
ದಾಂಡೇಲಿ: ಧರ್ಮಸ್ಥಳ, ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ ಮತ್ತು ಅಪಪ್ರಚಾರ ಮಾಡುತ್ತಿರುವವರ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಾಂಡೇಲಿಯ ಧರ್ಮಸ್ಥಳ ಭಕ್ತರಿಂದ ಮಂಗಳವಾರ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಅಂಬೇವಾಡಿಯ ಮಹಾಗಣಪತಿ ದೇವಸ್ಥಾನದ ಮುಂಭಾಗದಿಂದ ತಾಲೂಕು ಆಡಳಿತ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಸ್ಥಳ ಭಕ್ತವೃಂದದ ಪ್ರಮುಖ ಸಂದೇಶ್ ಎಸ್.ಜೈನ್, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಆರ್ಥಿಕ ಕ್ಷೇತ್ರಕ್ಕೆ ಧರ್ಮಸ್ಥಳದ ಕೊಡುಗೆ ಅಪಾರವಾಗಿದೆ ಎಂದರು.
ಇಡೀ ರಾಷ್ಟ್ರದಲ್ಲಿಯೇ ಇಂತಹ ಮಹೋನ್ನತ ಸೇವಾ ಕೈಂಕರ್ಯಗಳನ್ನು ಅವಿರತ, ಅನವರತ ಮಾಡುತ್ತಿರುವ ಕ್ಷೇತ್ರವಿದ್ದರೆ ಅದು ಧರ್ಮಸ್ಥಳ. ವೀರೇಂದ್ರ ಹೆಗ್ಗಡೆ ಸೇವಾ ಕೈಂಕರ್ಯ ಸದಾ ಸ್ಮರಣೀಯವಾಗಿದೆ. ಧರ್ಮಸ್ಥಳದ ವಿಚಾರದಲ್ಲಿ ನಾಡಿನ ಪ್ರತಿಯೊಬ್ಬ ಕ್ಷೇತ್ರದ ಫಲಾನುಭವಿ ಎಂದರೆ ತಪ್ಪಿಲ್ಲ.ಇಂತಹ ಪರಮ ಪವಿತ್ರ ಕ್ಷೇತ್ರಕ್ಕೆ ಮತ್ತು ಪೂಜ್ಯ ಹೆಗ್ಗಡೆ ಹೆಸರಿಗೆ ಕಳಂಕ ತರುವ ನಿಟ್ಟಿನಲ್ಲಿ ಬಹುದೊಡ್ಡ ಷಡ್ಯಂತ್ರ ನಡೆದಿದೆ. ಕಳೆದ 12-13 ವರ್ಷಗಳಿಂದ ನಿರಂತರವಾಗಿ ಕ್ಷೇತ್ರದ ಬಗ್ಗೆ ಹಾಗೂ ಪೂಜ್ಯರ ಬಗ್ಗೆ ಅಪಪ್ರಚಾರ, ಅವಹೇಳನಕಾರಿ ಹೇಳಿಕೆಗಳ ಮೂಲಕ ದುಷ್ಟ ಶಕ್ತಿಗಳು ಕ್ಷೇತ್ರದ ಘನತೆಗೆ ಮತ್ತು ಪಾವಿತ್ರ್ಯತೆಗೆ ಧಕ್ಕೆ ತರುವ ದುಸ್ಸಾಹಸಕ್ಕೆ ಕೈ ಹಾಕಿರುವುದನ್ನು ಇನ್ನು ಮುಂದೆ ನಾವು ಸಹಿಸುವುದಿಲ್ಲ ಎಂದರು.ಬುರುಡೆ ತಂದ ವ್ಯಕ್ತಿಯನ್ನು ಬುರುಡೆ ಎಲ್ಲಿಂದ ತಂದ, ಹೇಗೆ ತಂದ ಎನ್ನುವುದನ್ನು ಪರಿಶೀಲನೆ ಮಾಡದೇ ಆತನನ್ನು ನಂಬಿರುವುದು ನಿಜಕ್ಕೂ ಆಶ್ಚರ್ಯ. ಕ್ಷೇತ್ರದ ಹಾಗೂ ಪೂಜ್ಯರ ಬಗ್ಗೆ ಮನಸ್ಸೋ ಇಚ್ಛೆ ಷಡ್ಯಂತ್ರ ನಡೆಸುತ್ತಿರುವ ದುಷ್ಟ ಶಕ್ತಿಗಳ ಯಾವ ಆಟವು ನಡೆಯದು. ಧರ್ಮ ಮತ್ತು ಸತ್ಯಕ್ಕೆ ಎಂದು ಸಾವಿಲ್ಲ ಎನ್ನುವುದನ್ನು ಬುರುಡೆ ಪ್ರಕರಣ ತೋರಿಸಿಕೊಟ್ಟಿದೆ. ಇಷ್ಟು ದಿನ ಕ್ಷೇತ್ರದ ಭಕ್ತರಾಗಿ ಅತ್ಯಂತ ತಾಳ್ಮೆಯಿಂದ ಇದ್ದೇವು. ಇನ್ನು ಮುಂದೆ ಇಂತಹ ದುಷ್ಟ ಶಕ್ತಿಗಳ ಕುತಂತ್ರ ಬುದ್ಧಿ ಮತ್ತು ಷಡ್ಯಂತ್ರವನ್ನು ನಾವು ಸಹಿಸುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಭಕ್ತವೃಂದದ ಬಾಬಣ್ಣ ಶ್ರೀವತ್ಸ, ಸುಧಾಕರ ಶೆಟ್ಟಿ, ಕೃಷ್ಣ ಪೂಜಾರಿ, ಬುಧವಂತಗೌಡ ಪಾಟೀಲ್, ಸುಧಾಕರ ರೆಡ್ಡಿ, ಉದಯ ಶೆಟ್ಟಿ, ಕರುಣಾಕರ ಶೆಟ್ಟಿ, ವಾಮನ ಮಿರಾಶಿ, ಸುರೇಶ ಕಾಮತ್, ರವಿ ಗಾಂವಕರ, ಮಾರುತಿ ಕಾಮ್ರೇಕರ, ಚಂದ್ರು ಮಾಳಿ, ಹನುಮಂತ ಕಾರ್ಗಿ, ಪದ್ಮಜಾ ಪ್ರವೀಣ್ ಜನ್ನು, ನಾಗರಾಜ ಅನಂತಪುರ, ಮಂಜು ಶಟ್ಟಿ, ವಸಂತ ಗಾವಡೆ, ಬಸವರಾಜ ಹುಂಡೇಕರ, ಮಹಾವೀರ ಘಾಳಿ, ಸುನೀಲ ಸೋಮನಾಚೆ, ಶ್ರೀನಾಥ ಪಾಸಲ್ಕರ, ವಿಷ್ಣು ಕಲಾಲ್, ಸುರೇಂದ್ರ ಓಝಾ, ಬಾಬು ಪಗಾಡೆ, ಮುರ್ಗೇಶ ನಾಯರ್, ನಿಲೇಶ ನಾಯ್ಕ, ಹನುಮಂತ ಭಾಗವಹಿಸಿದ್ದರು.