ಫೇಸ್‌ಲೆಸ್ ಹಾಗೂ ಪೇಪರ್‌ಲೆಸ್ ಮೂಲಕ ಆಸ್ತಿ ನೋಂದಣಿ ನಿಯಮ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ತಾಲೂಕು ಮುದ್ರಾಂಕ ಮಾರಾಟಗಾರರ ಮತ್ತು ದಸ್ತು ಬರಹಗಾರರ ಸಂಘದ ಸದಸ್ಯರು ಗುರುವಾರ ನಗರದ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.

ರಾಣಿಬೆನ್ನೂರು: ಫೇಸ್‌ಲೆಸ್ ಹಾಗೂ ಪೇಪರ್‌ಲೆಸ್ ಮೂಲಕ ಆಸ್ತಿ ನೋಂದಣಿ ನಿಯಮ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ತಾಲೂಕು ಮುದ್ರಾಂಕ ಮಾರಾಟಗಾರರ ಮತ್ತು ದಸ್ತು ಬರಹಗಾರರ ಸಂಘದ ಸದಸ್ಯರು ಗುರುವಾರ ನಗರದ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.

ಸಂಘದ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ಮಾತನಾಡಿ, ರಾಜ್ಯ ಸರ್ಕಾರ ಡಿಜಟಲೀಕರಣದ ಹೆಸರಿನಲ್ಲಿ ಕಾವೇರಿ 1.0 ತಂತ್ರಾಂಶ ಜಾರಿಗೆ ತಂದಿತ್ತು. ಈಗ ಕಾವೇರಿ 3.0 ಬರುತ್ತಿದ್ದು ಫೇಸ್‌ಲೆಸ್ ಹಾಗೂ ಪೇಪರ್‌ಲೆಸ್ ಮೂಲಕ ಆಸ್ತಿ ನೋಂದಣಿ ವ್ಯವಸ್ಥೆ ಜಾರಿಗೆ ಸಿದ್ಧತೆ ನಡೆದಿದೆ. ಇದರಿಂದ ದಸ್ತಾವೇಜುದಾರರಿಗೆ ಯಾವುದೇ ಬರಹದ ಕೆಲಸವಿಲ್ಲದಂತಾಗುತ್ತದೆ. ಅಲ್ಲದೇ ಇದನ್ನೇ ನಂಬಿಕೊಂಡ ದಸ್ತಾವೇಜುದಾರರ ಕುಟುಂಬಗಳು ಬೀದಿಪಾಲಾಗುವ ಅಪಾಯವಿದೆ. ರಾಜ್ಯದಲ್ಲಿ ಇಂತಹ ಹತ್ತಾರು ಸಾವಿರ ದಸ್ತಾವೇಜು ಬರಹಗಾರರು ನಿರುದ್ಯೋಗಿಗಳಾಗಲಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೂ ತರಲಾಗಿದ್ದು, ಇದರಿಂದಾಗುವ ಸಮಸ್ಯೆ ವಿವರಿಸಲಾಗಿದೆ. ನಮ್ಮ ರಾಜ್ಯ ಸಂಘ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಮೂರು ಬಾರಿ ಭೇಟಿ ವಾಸ್ತವ ಸಂಗತಿ ಮನವರಿಕೆ ಮಾಡಿದೆ. ಪರೋಕ್ಷವಾಗಿ ದಸ್ತಾವೇಜು ಬರಹಗಾರರನ್ನು ಮೂಲೆಗುಂಪು ಮಾಡುವ ಇಂತಹ ನಿಯಮ ಬೇಡ. ಅನ್ಯ ರಾಜ್ಯದಲ್ಲಿರುವಂತೆ ನಮ್ಮ ರಾಜ್ಯದಲ್ಲಿಯೂ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡಬೇಕು. ನೋಂದಣಿಯಾಗುವ ಎಲ್ಲ ದಸ್ತಾವೇಜುಗಳಿಗೆ ಪತ್ರ ಬರಹಗಾರರ ಅಥವಾ ವಕೀಲರ ದಸ್ತೂರನ್ನು ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದರು.

ರಮೇಶ ಕುಲಕರ್ಣಿ, ಗೋಪಾಲಕೃಷ್ಣ ಲಕ್ಷ್ಮೇಶ್ವರ, ಶ್ರೀನಿವಾಸ ಖಂಡೆ, ವಿನಾಯಕ ಲಕ್ಷ್ಮೇಶ್ವರ, ಗದಿಗೆಪ್ಪ ಕಮ್ಮಾರ, ಕೊಟ್ರೇಶ ಮೂಲಿಮಠ, ಸಂಜೀವ ಲಕ್ಷ್ಮೇಶ್ವರ, ಮೋಹನ ಮಾನೆ, ವಾದಿರಾಜ ಉಡುಪಿ, ಶ್ರೀರಾಮಚಂದ್ರ ಮುದ್ದಿ, ಹನುಮಂತಪ್ಪ ಕಬ್ಬಾರ ಮತ್ತಿತರರಿದ್ದರು.