ರಾಜ್ಯ ಸರ್ಕಾರ ಹಾಲಿನ ದರ ಲೀಟರ್ಗೆ ₹8 ಹೆಚ್ಚಳ ಮಾಡಿರುವುದನ್ನು ಹಾಗೂ ಬಸ್ ದರ ಏರಿಕೆಯ ಪ್ರಸ್ತಾವನೆ ಖಂಡಿಸಿ ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಶನಿವಾರ ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.
ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಧಾರವಾಡದಲ್ಲಿ ಆಕ್ರೋಶ
ಕನ್ನಡಪ್ರಭ ವಾರ್ತೆ ಧಾರವಾಡರಾಜ್ಯ ಸರ್ಕಾರ ಹಾಲಿನ ದರ ಲೀಟರ್ಗೆ ₹8 ಹೆಚ್ಚಳ ಮಾಡಿರುವುದನ್ನು ಹಾಗೂ ಬಸ್ ದರ ಏರಿಕೆಯ ಪ್ರಸ್ತಾವನೆ ಖಂಡಿಸಿ ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಶನಿವಾರ ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು.
ರಾಜ್ಯದ ಜನರು ಬರಗಾಲದಿಂದ ಹಾಗೂ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ತತ್ತರಿಸಿರುವ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರವು ಹಾಲಿನ ದರವನ್ನು ಅತ್ಯಂತ ಅವೈಜ್ಞಾನಿಕವಾಗಿ ಹೆಚ್ಚಳ ಮಾಡಿರುವ ನಿರ್ಧಾರ ಸರಿಯಲ್ಲ. ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಹೈನುಗಾರರ ಸಮಸ್ಯೆಯನ್ನು ಪರಿಹರಿಸಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಲಕ್ಷ್ಮಣ ಜಡಗಣ್ಣವರ ಮಾತನಾಡಿ, ಗ್ರಾಮೀಣ ಹೈನುಗಾರರಿಗೆ ಬೆಂಬಲ ನೀಡುವ ಹೆಸರಿನಲ್ಲಿ ಇಂತಹ ಒತ್ತಾಯವನ್ನು ಮಾಡಿದೆ. ಸರ್ಕಾರ ಹಾಲು ಉತ್ಪಾದಕರ ಮತ್ತು ಗ್ರಾಹಕರ ಇಬ್ಬರ ಹಿತವನ್ನು ಪರಿಗಣಿಸಬೇಕು. ಮೇವು, ಪಶು ಆಹಾರ ಇತ್ಯಾದಿಗಳನ್ನು ರಿಯಾಯಿತಿ ದರದಲ್ಲಿ ಪೂರೈಸಬೇಕು. ಕೆಎಂಎಫ್ನಲ್ಲಿ ದುಂದುವೆಚ್ಚ ತಡೆಗಟ್ಟಬೇಕು. ಉತ್ಪಾದನೆಯ ವೆಚ್ಚ ಕಡಿಮೆ ಮಾಡುವ ಬದಲಿಗೆ ದರ ಹೆಚ್ಚಳವನ್ನೇ ಪರಿಹಾರ ಎಂದು ಪರಿಗಣಿಸಿದರೆ ಆಗ ಹಣದುಬ್ಬರದ ವಿಷಚಕ್ರಕ್ಕೆ ಎಲ್ಲರೂ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಮ್ಮ ದುಂದುವೆಚ್ಚಗಳನ್ನು ಕಡಿತ ಮಾಡಬೇಕು, ದೊಡ್ಡ ದೊಡ್ಡ ಬಂಡವಾಳಗಾರರ ಸಾಲ ಮನ್ನಾ ಮಾಡುವುದನ್ನು ನಿಲ್ಲಿಸಬೇಕು. ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಸಮಿತಿ ಸದಸ್ಯರಾದ ಶರಣು ಗೋನವಾರ ಅಧ್ಯಕ್ಷತೆ ವಹಿಸಿದ್ದರು. ಭುವನಾ ಬಳ್ಳಾರಿ, ದೀಪಾ ಧಾರವಾಡ, ಮಧುಲತಾ ಗೌಡರ್, ಭವಾನಿಶಂಕರ್ ಗೌಡ ಇದ್ದರು.