₹೫ಕೋಟಿ ಅನುದಾನದಲ್ಲಿ ಕೊಟ್ಟೂರಿನ ರಥ ಬೀದಿಯನ್ನು ಸಿಸಿ ರಸ್ತೆಯನ್ನಾಗಿ ಮಾರ್ಪಡಿಸುವ ಕಾಮಗಾರಿಗೆ ಸಹಕರಿಸುವ ಬದಲಾಗಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕ್ಷಲ್ಲಕ ಕಾರಣಕ್ಕೆ ಕಾಮಗಾರಿ ನಡೆಯದಂತೆ ಅಡ್ಡಿಪಡಿಸಿದ್ದಾರೆ
ಹಗರಿಬೊಮ್ಮನಹಳ್ಳಿ: ₹೧೧೦ಕೋಟಿ ಅನುದಾನದಲ್ಲಿ ೨೦೨೭ರ ಡಿಸೆಂಬರ್ನೊಳಗೆ ಕ್ಷೇತ್ರ ವ್ಯಾಪ್ತಿಯ ರಸ್ತೆಗಳನ್ನು ಡಾಂಬರೀಕರಣಗೊಳಿಸಿ ಸುಸಜ್ಜಿತ ರಸ್ತೆ ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರ ಸುಗುಮ ಸಂಚಾರಕ್ಕೆ ಆದ್ಯತೆ ನೀಡಲಾಗುತ್ತದೆ. ೮೦% ರಸ್ತೆಗಳನ್ನು ಅಭಿವೃದ್ಧಿಗೊಳಿಸಿ ೨೦೨೮ರ ಚುನಾವಣೆ ಎದುರಿಸುತ್ತೇನೆ ಎಂದು ಶಾಸಕ ನೇಮಿರಾಜ್ ನಾಯ್ಕ ಪ್ರಕಟಿಸಿದರು.
ತಾಲೂಕಿನ ಬ್ಯಾಸಿಗದೇರಿ ಗ್ರಾಮದ ಬಳಿ ಇರುವ ದುರುಗಮ್ಮ ದೇಗುಲದ ಬಳಿ ಶನಿವಾರ ಕೆಕೆಆರ್ಡಿಬಿ ಯೋಜನೆಯ ₹೪೪೯ಲಕ್ಷ ಅನುದಾನದ ಬ್ಯಾಸಿಗದೇರಿ ಕ್ರಾಸ್-ನಂದೀಪುರ ನಡುವಿನ ರಸ್ತೆ ಅಭಿವೃದ್ಧಿ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಬ್ಯಾಸಿಗದೇರಿ ಕ್ರಾಸ್-ಚಿಲಗೋಡು, ಬ್ಯಾಲಾಳು-ಚಿಲಗೊಡು-ತಂಬ್ರಹಳ್ಳಿ, ಕಡ್ಲಬಾಳು-ಅಡವಿಆನಂದ ದೇವನಹಳ್ಳಿ ಹಾಗೂ ಪಟ್ಟಣದಿಂದ ಹೊಸಪೇಟೆ ಸೇರಿದಂತೆ ಆನೇಕಲ್, ಚಿಂತ್ರಪಳ್ಳಿ ನಾಣ್ಯಾಪುರ ಮತ್ತಿತರೇ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳ ನಿರ್ಮಾಣಕ್ಕೆ ₹೧೧೦ ಕೋಟಿ ಅಗತ್ಯ ಅನುದಾನ ಬಿಡುಗಡೆಯಾಗಿದೆ ಎಂದು ವಿವರಿಸಿದರು.
₹೫ಕೋಟಿ ಅನುದಾನದಲ್ಲಿ ಕೊಟ್ಟೂರಿನ ರಥ ಬೀದಿಯನ್ನು ಸಿಸಿ ರಸ್ತೆಯನ್ನಾಗಿ ಮಾರ್ಪಡಿಸುವ ಕಾಮಗಾರಿಗೆ ಸಹಕರಿಸುವ ಬದಲಾಗಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕ್ಷಲ್ಲಕ ಕಾರಣಕ್ಕೆ ಕಾಮಗಾರಿ ನಡೆಯದಂತೆ ಅಡ್ಡಿಪಡಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಇದೇ ವೇಳೆ ನಂದೀಪುರ ಗ್ರಾಪಂ ಮಾಜಿ ಅಧ್ಯಕ್ಷ ಯಮುನಪ್ಪ ಮಾತನಾಡಿ, ಈ ಹಿಂದೆ ಶಾಸಕರಾಗಿದ್ದ ಸಿರಾಜ್ ಶೇಖ್ ಗ್ರಾಮದಲ್ಲಿ ಆಶ್ರಯ ಯೋಜನೆಗಾಗಿ ೫ ಎಕರೆ ಜಮೀನನ್ನು ಕಾಯ್ದಿರಿಸಿದ್ದರು. ಆದರೆ ೨೫ ವರ್ಷಗಳ ನಂತರವೂ ಅರ್ಹ ಫಲಾನುಭವಿಗಳಿಗೆ ನಿವೇಶನ ಒದಗಿಸಲಾಗಿಲ್ಲ. ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನ ವಿತರಿಸುವಂತೆ ಶಾಸಕರ ಗಮನ ಸೆಳೆದರು.
ಬ್ಯಾಸಿಗದೇರಿ ದುರುಗಮ್ಮ ದೇಗುಲಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಕುಡಿಯುವ ನೀರಿನ ಸ್ಥಾವರಕ್ಕೆ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ನಂದೀಪುರ ಗ್ರಾಮಸ್ಥರು ಶಾಸಕರಿಗೆ ಮನವಿ ನೀಡಿದರು.ಡಾ. ಮಹೇಶ್ವರ ಶ್ರೀಗಳು, ಹಾಲಸಿದ್ದೇಶ್ವರ ಶ್ರೀಗಳು, ಜೆಡಿಎಸ್ ತಾಲೂಕಾಧ್ಯಕ್ಷ ವೈ. ಮಲ್ಲಿಕಾರ್ಜುನ, ವಿಶ್ವಕರ್ಮ ಸಮಾಜದ ತಾಲೂಕಾಧ್ಯಕ್ಷ ಸಿದ್ಧರಾಜ್, ಚಿತವಾಡಗಿ ಪ್ರಕಾಶ್, ಲೋಕೋಪಯೋಗಿ ಇಲಾಖೆಯ ಎಇಇ ಸತೀಶ್ ನಾಯ್ಕ, ಗುತ್ತಿಗೆದಾರ ಕೇಶವರೆಡ್ಡಿ. ನಂದೀಪುರ ಗ್ರಾಮದ ಮುಖಂಡ ದೇವರೆಡ್ಡಿ, ಅಲ್ಲಾಭಕ್ಷಿ, ದೊಡ್ಡಬಸಪ್ಪ, ಬಸವರೆಡ್ಡಿ ಹಾಗೂ ಬ್ಯಾಸಿಗದೇರಿ ಜಂಬಣ್ಣ ಮತ್ತಿತರರಿದ್ದರು.