ಸಾರಾಂಶ
ಬಿಜೆಪಿ, ಹಿಂದುಪರ ಸಂಘಟನೆ, ಎಸ್.ಎಸ್.ಕೆ ಸಮಾಜದ ಮುಖಂಡರು ಶನಿವಾರ ರಾತ್ರಿ ದಿಢೀರ್ ಪ್ರತಿಭಟನೆ
ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗ್ಯನಗರಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ದಸರಾ ಪ್ರಯುಕ್ತ ಅಂಬಾಭವಾನಿ ದೇವಸ್ಥಾನದ ಮುಂಭಾಗದಲ್ಲಿ ಹಾಕಲಾದ ಕೇಸರಿ ಬಾವುಟಗಳನ್ನು ಅಧಿಕಾರಿಗಳು ತೆರವು ಮಾಡಿಸಲು ಮುಂದಾಗಿದ್ದನ್ನು ಖಂಡಿಸಿ ಬಿಜೆಪಿ, ಹಿಂದುಪರ ಸಂಘಟನೆ, ಎಸ್.ಎಸ್.ಕೆ ಸಮಾಜದ ಮುಖಂಡರು ಶನಿವಾರ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಭಾಗ್ಯನಗರ ಪಟ್ಟಣದ ಅಂಬಾಭವಾನಿ ದೇವಸ್ಥಾನ ಎದುರಿನ ರಸ್ತೆಯಲ್ಲಿ ದಸರಾ ಹಿನ್ನೆಲೆ ಕೇಸರಿ ಬಂಟಿಂಗ್ಸ್ ಕಟ್ಟಲಾಗಿದೆ. ಅದರ ಪಕ್ಕದಲ್ಲಿಯೇ ಇರುವ ಇಂದಿರಾ ಕ್ಯಾಂಟೀನನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲು ಆಗಮಿಸುತ್ತಿದ್ದಾರೆ. ಹೀಗಾಗಿ ಬಂಟಿಂಗ್ಸ್ ತೆರವು ಮಾಡಲು ಕಾರ್ಯಕ್ರಮ ಆಯೋಜಕರು ಮುಂದಾದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಪೊಲೀಸರು ಆಗಮಿಸಿ ತೆರವು ಮಾಡಲು ಮುಂದಾಗಿದ್ದರಿಂದ ಪ್ರತಿಭಟನೆ ಮಾಡಲಾಯಿತು.ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ನಗರ ಠಾಣೆಯ ಪಿಐ ಜಯಪ್ರಕಾಶ ಅವರು, ಬಿಜೆಪಿ ಮುಖಂಡರೊಂದಿಗೆ ಚರ್ಚೆ ನಡೆಸಿದ್ದಾಗ ಪರಿಸ್ಥಿತಿ ಕೈಮೀರುವ ಹಂತ ತಲುಪಿದ್ದರಿಂದ ಬಂಟಿಂಗ್ಸ್ ಮತ್ತು ಕೆಸರಿ ಬಾವುಟ ತೆರವು ಕೈಬಿಡಲಾಯಿತು. ಇದರಿಂದ ಪ್ರತಿಭಟನೆ ಮಾಡುತ್ತಿದ್ದವರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.