ಧಾರವಾಡ:

ತೀವ್ರ ವಿರೋಧದ ನಡುವೆಯೂ ಶಾಲೆಗಳ ವಿಲೀನ ಮುಂದುವರಿಸಿದ ಸರ್ಕಾರದ ಹಠಮಾರಿ ಹಾಗೂ ಸರ್ವಾಧಿಕಾರಿ ಧೋರಣೆ ಖಂಡಿಸಿ ಗುರುವಾರ ಎಐಡಿಎಸ್‌ಒ ಸಂಘಟನೆಯು ಮಕ್ಕಳು ಹಾಗೂ ಪಾಲಕರೊಂದಿಗೆ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.

ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ರಾಜ್ಯ ಸರ್ಕಾರವು 317 ಸರ್ಕಾರಿ ಶಾಲೆ ವಿಲೀನಗೊಳಿಸಲು ಆದೇಶಿಸಲಾಗಿದೆ. ಇದರಲ್ಲಿ ಪಿಯು ಕಾಲೇಜುಗಳೂ ಇವೆ. ಶಿಕ್ಷಣಕ್ಕೆ 8 ಗ್ಯಾರಂಟಿ ನೀಡಿ ದೇಶದಲ್ಲೇ ಮಾದರಿ ಶಾಲಾ ವ್ಯವಸ್ಥೆ ನಿರ್ಮಿಸುತ್ತೇವೆ ಎಂದು ಸರ್ಕಾರವು ಹೇಳುತ್ತಿದೆ. ಆದರೆ, ವಾಸ್ತವದಲ್ಲಿ ಈ ಗ್ಯಾರಂಟಿಗಳು ಮೋಸದಿಂದ ಕೂಡಿವೆ. ಸರ್ಕಾರಿ ಶಾಲೆ ಮುಚ್ಚುವ ಅಂಶವನ್ನು ನಯವಾಗಿ ತಳ್ಳಿ ಹಾಕುತ್ತಾ ಗ್ಯಾರಂಟಿಗಳ ಮುಖವಾಡದಲ್ಲಿ ನಾಡಿನ ಜನತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಮೋಸ ಮಾಡುತ್ತಿದೆ ಎಂದು ಎಐಡಿಎಸ್‌ಒ ಜಿಲ್ಲಾಧ್ಯಕ್ಷರಾದ ಸಿಂಧು ಕೌದಿ ಹೇಳಿದರು.

ರಾಜ್ಯ ಸರ್ಕಾರವು ತನ್ನ ಹಠಮಾರಿ ಧೋರಣೆ ಕೈಬಿಡಬೇಕು. ಜತೆಗೆ ಸರ್ಕಾರದ ಈ ಬೂಟಾಟಿಕೆ ಅರಿತು ‘ನಮ್ಮೂರ ಶಾಲೆ’ ಉಳಿಸುವ ಪ್ರತಿರೋಧ ಚಳವಳಿಯನ್ನು ಮತ್ತಷ್ಟು ಬಲಪಡಿಸಬೇಕೆಂದು ಕರೆ ನೀಡಿದರು.

ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಅಧ್ಯಕ್ಷ ಮಲ್ಲೇಶ ಕಟಗಿ ಮಾತನಾಡಿ, ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಒಂದೇ ನಾಣ್ಯದ ಎರಡು ಮುಖಗಳು. ಇಬ್ಬರು ಒಂದಾಗಿ 40 ಸಾವಿರ ಶಾಲೆ ಮುಚ್ಚಲು ಮುಂದಾಗಿದ್ದಾರೆ. ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ, ಶಿಕ್ಷಕರ ನೇಮಕಾತಿ ಮಾಡಿಕೊಂಡು ಬಲಪಡಿಸಬೇಕು. ಇದನ್ನು ಬಿಟ್ಟು ಹಳ್ಳಿಯ ಶಾಲೆ ಮುಚ್ಚಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸಮಿತಿ ಜಿಲ್ಲಾ ಉಪಾಧ್ಯಕ್ಷೆ ಭವಾನಿ ಶಂಕರಗೌಡ ಮಾತನಾಡಿದರು. ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಶಶಿಕಲಾ ಮೇಟಿ, ವಿನಯ ಚಂದ್ರ, ಮಲ್ಲೇಶ ಕಟಗಿ, ಭವಾನಿಶಂಕರ ಗೌಡ, ಗಂಗಾ ಕೋಕರೆ, ಶರಣಬಸವ ಗೋನವಾರ, ಭುವನ ಬಳ್ಳಾರಿ ಮತ್ತಿತರರು ಇದ್ದರು.