ಸೊರಬ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಾಮಾಜಿಕ ಬಹಿಷ್ಕಾರದ ಅನಿಷ್ಟ ಪದ್ಧತಿಯಿಂದ ದೌರ್ಜನ್ಯಕ್ಕೆ ಒಳಪಟ್ಟಿರುವ ಕುಟುಂಬಗಳಿಗೆ ರಕ್ಷಣೆ ಹಾಗೂ ನ್ಯಾಯ ನೀಡಬೇಕು ಮತ್ತು ಬಹಿಷ್ಕಾರ ಹಾಕಿರುವವರ ವಿರುದ್ಧ ಸೂಕ್ತ ಕಾನುನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಸೋಮವಾರ ಗೋಪಿವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಶಿವಮೊಗ್ಗ: ಸೊರಬ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಾಮಾಜಿಕ ಬಹಿಷ್ಕಾರದ ಅನಿಷ್ಟ ಪದ್ಧತಿಯಿಂದ ದೌರ್ಜನ್ಯಕ್ಕೆ ಒಳಪಟ್ಟಿರುವ ಕುಟುಂಬಗಳಿಗೆ ರಕ್ಷಣೆ ಹಾಗೂ ನ್ಯಾಯ ನೀಡಬೇಕು ಮತ್ತು ಬಹಿಷ್ಕಾರ ಹಾಕಿರುವವರ ವಿರುದ್ಧ ಸೂಕ್ತ ಕಾನುನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಸೋಮವಾರ ಗೋಪಿವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ಈ ವೇಳೆ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಕಿರಣ್‌ಕುಮಾರ್, ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ವಿಚಾರವಾಗಿದ್ದು, ಹಲವಾರು ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ ಈ ಪದ್ಧತಿ ಇನ್ನೂ ಜೀವಂತವಾಗಿದ್ದು, ಚುನಾಯಿತ ಪ್ರತಿನಿಧಿಗಳ ಮತ್ತು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಇನ್ನೂ ಈ ಪದ್ಧತಿ ಕೆಲವೆಡೆ ಜೀವಂತವಾಗಿದೆ ಎಂದು ದೂರಿದರು.

ಅನೇಕ ಕುಟುಂಬಗಳು ಬಹಿಷ್ಕಾರದ ಸುಳಿಯಲ್ಲಿ ಸಿಲುಕಿ ಶೋಚನೀಯ ಬದುಕನ್ನು ಸವೆಸುತ್ತಿದ್ದು, ಶುಭ ಸಮಾರಂಭ, ಶವ ಸಂಸ್ಕಾರ, ಹಾಗೂ ದೇವಸ್ಥಾನದ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಾಗದೆ ಉದ್ಯೋಗವನ್ನೂ ಮಾಡಲಾಗದೆ ಪರಿತಪಿಸುತ್ತಿದ್ದಾರೆ. ಬಹಿಷ್ಕಾರಕ್ಕೆ ಒಳಗಾದವರಿಗೆ ಜೀವನ ನಿರ್ವಹಣೆಗೆ ಅಂಗಡಿಗಳಲ್ಲಿ ಧವಸ-ಧಾನ್ಯ ನೀಡುತ್ತಿಲ್ಲ. ಶಾಲಾ-ಕಾಲೇಜಿಗೆ ತೆರಳಲು ಆಟೋಗಳಲ್ಲಿ ಪ್ರವೇಶ ನೀಡುತ್ತಿಲ್ಲ. ಇತರ ಮಕ್ಕಳೊಂದಿಗೆ ಮಾತನಾಡುವಂತಿಲ್ಲ. ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.ಇತ್ತೀಚೆಗೆ ಸೊರಬ ತಾಲೂಕಿನ ಗುಡವಿ ಗ್ರಾಮದ ಅಂಬೇಡ್ಕರ ನಗರದ ಮೋಹನ್‌ಕುಮಾರ್ ಕುಟುಂಬ, ವೆಂಕಟೇಶ್ ಬಿನ್ ಗೌರಪ್ಪ ದಡ್ಡಿ ಕುಟುಂಬ, ದೂಗೂರು ಗ್ರಾಮದ ಷಣ್ಮುಖ ಬಿನ್ ಈರಪ್ಪ ಮೂಡುಗೆರೆ ಕುಟುಂಬ, ಗಣಪತಿಯಪ್ಪ ಬಿನ್ ಸನ್ಯಪ್ಪ ಕುಟುಂಬ, ಕರಿಯಪ್ಪ ಬಿನ್ ಸಣ್ಣದ್ಯಾಮಪ್ಪ ಕುಟುಂಬ, ಸೋಮಪ್ಪ ಬಿನ್ ರಾಮಪ್ಪ ಕುಟುಂಬ, ಪರಶುರಾಂ ಬಿನ್ ರಾಮಪ್ಪ, ಕನ್ನಪ್ಪ ಬಿನ್ ಬಸವಣ್ಯಪ್ಪ ಈ ರೀತಿ 20ಕ್ಕೂ ಹೆಚ್ಚು ಕುಟುಂಬಗಳು ಸಾಮಾಜಿಕ ಬಹಿಷ್ಕಾರ ಎಂಬ ಅನಿಷ್ಟ ಪದ್ಧತಿಗೆ ನಲುಗಿದ್ದು, ಸೊರಬ ತಾಲೂಕಿನಲ್ಲಿ ಇನ್ನೂ ಈ ಪದ್ಧತಿ ಜೀವಂತವಾಗಿದೆ. ಈ ಬಗ್ಗೆ ಲಿಖಿತ ಹಾಗೂ ಮೌಖಿಕ ದೂರು ಮತ್ತು ಮಾಹಿತಿಗಳನ್ನು ಅಧಿಕಾರಿಗಳಿಗೆ ನೀಡಿದರೂ ಯಾವುದೇ ಕ್ರಮವಾಗಿಲ್ಲ ಎಂದು ದೂರಿದರು.ಪ್ರಭಾವಿಗಳು ಈ ಬಹಿಷ್ಕಾರವನ್ನು ಜೀವಂತವಾಗಿಟ್ಟಿದ್ದು, ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ತಮ್ಮ ಪ್ರಭಾವ ಬಳಸಿ ಈ ಅನಿಷ್ಟ ಪದ್ಧತಿ ಇನ್ನೂ ಜಾರಿಯಲ್ಲಿರುವಂತೆ ನೋಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಆರೋಪಿತರ ಮೇಲೆ ಕಠಿಣಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ 15 ದಿನಗಳಲ್ಲಿ ವೇದಿಕೆಯು ಅಹೋರಾತ್ರಿ ಧರಣಿಯಂತಹ ಉಗ್ರ ಹೋರಾಟಕ್ಕೆ ಮುಂದಾಗಲಿದೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ವೇದಿಕೆಯ ಉಪಾಧ್ಯಕ್ಷ ಸೈಯದ್ ಮುಜೀಬುಲ್ಲಾ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕವಿತಾ, ಪಮುಖರಾದ ಮಹಮ್ಮದ್ ಷಫೀ, ಜ್ಯೋತಿ, ಪದ್ಮಾ, ನೂರುಲ್ಲಾಖಾನ್, ಸಾದಿಕ್, ಕೇಶವ, ಗಂಗಾಧರ್, ನಾಗರಾಜ್, ಆರತಿ ತಿವಾರಿ, ಜೀವನ್ ಮತ್ತಿತರರು ಇದ್ದರು.