ಸಾರಾಂಶ
ರಾಜ್ಯ ಸರ್ಕಾರ ಕನ್ನಡಿಗರ ಉದ್ಯೋಗ ಮೀಸಲಾತಿ ಹಿಂಪಡೆದಿರುವ ಕ್ರಮವನ್ನು ವಿರೋಧಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಚಾಮರಾಜನಗರ: ರಾಜ್ಯ ಸರ್ಕಾರ ಕನ್ನಡಿಗರ ಉದ್ಯೋಗ ಮೀಸಲಾತಿ ಹಿಂಪಡೆದಿರುವ ಕ್ರಮವನ್ನು ವಿರೋಧಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ನಗರದ ಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾನಿರತರು ರಾಜ್ಯ ಸರ್ಕಾರ, ವಿಪಕ್ಷಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕೊಟ್ಟು ಹಿಂಪಡೆದಿರುವುದು ಖಂಡನೀಯ. ಇದೊಂದು ಗೋಸುಂಬೆ ಸರ್ಕಾರ, ಕನ್ನಡ ವಿರೋಧಿ ಸರ್ಕಾರವಾಗಿದೆ ಎಂದು ದೂರಿದರು.
3 ದಶಕಗಳಿಂದಲೂ ಕನ್ನಡಿಗರಿಗೆ ಉದ್ಯೋಗದಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕೆಂದು ಹೋರಾಟ ಮಾಡಲಾಗುತ್ತಿದೆ. ಆದರೆ, ಸಿದ್ದರಾಮಯ್ಯ ಸರ್ಕಾರ ಮೀಸಲಾತಿ ಘೋಷಣೆ ಮಾಡಿ ಬಳಿಕ ಹಿಂಪಡೆಯುವ ಮೂಲಕ ಗೋಸುಂಬೆತನ ಪ್ರದರ್ಶನ ಮಾಡಿದ್ದಾರೆ ಎಂದು ಕಿಡಿಕಾರಿದರು. ಈ ಸರ್ಕಾರದಿಂದ ಕನ್ನಡಿಗರ ರಕ್ಷಣೆ ನೀರಿಕ್ಷಿಸಲು ಆಗಲ್ಲ, ವಿರೋಧ ಪಕ್ಷಗಳು ಈ ಕುರಿತು ಚಕಾರ ಎತ್ತದಿರುವುದು ಖಂಡನೀಯ. ಕೂಡಲೇ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಘೋಷಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಶಾ.ಮುರಳಿ, ಪಣ್ಯದಹುಂಡಿ ರಾಜು, ಚಾ.ವೆಂ.ರಾಜ್ ಗೋಪಾಲ್, ಚಾ.ರಾ.ಕುಮಾರ್, ನಿಜಧ್ವನಿಗೋವಿಂದರಾಜು, ಮಹೇಶ್ ಗೌಡ, ಲಿಂಗರಾಜು, ಗು.ಪುರುಷೋತ್ತಮ್, ದೊಡ್ಡರಾಯಪೇಟೆ ಮಲ್ಲಣ್ಣ, ಆಟೋ ನಾಗೇಶ ಇತರರು ಭಾಗವಹಿಸಿದ್ದರು.