ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯ ಕಾಂಗ್ರೆಸ್ ಸರ್ಕಾರ ರೈತಪರ ಯೋಜನೆಗಳನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಹಾಗೂ ಬೆಳಗಾವಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ರ್‍ಯಾಲಿ ಮೂಲಕ ತೆರಳಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಆಕ್ರೋಶ ವ್ಯಕ್ತಪಡಿಸಿದರು.ಬೆಳಗಾವಿ ಜಿಲ್ಲೆಯನ್ನು ತಕ್ಷಣ ಬರಪೀಡಿತ ಜಿಲ್ಲೆಯೆಂದು ಘೋಷಿಸಿ ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಕಲ್ಪಿಸಿ ಯಾವುದೇ ರೀತಿಯ ಲೋಡ್ ಶೆಡ್ಡಿಂಗ್ ಮಾಡಬಾರದು. ಬಿತ್ತನೆಗೆ ಅಗತ್ಯವಾದ ಬೀಜ ಮತ್ತು ರಸಗೊಬ್ಬರಗಳನ್ನು ಸಕಾಲಕ್ಕೆ ವಿತರಿಸಬೇಕು ಹಾಗೂ ಕಳಪೆ ಬೀಜ ಮತ್ತು ಗೊಬ್ಬರ ವಿತರಣೆಗೆ ಕಡಿವಾಣ ಹಾಕಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಚುನಾವಣಾ ಭರವಸೆಯಂತೆ ಕೃಷಿ ಸಾಲಮನ್ನಾವನ್ನು ಸಂಪೂರ್ಣವಾಗಿ ಜಾರಿಗೊಳಿಸಿಲ್ಲವೆ ಎಂದು ಆರೋಪಿಸಿರುವ ಬಿಜೆಪಿ, ರೈತ ವಿದ್ಯಾನಿಧಿ ಹಾಗೂ ಕಿಸಾನ್ ಸಮ್ಮಾನ್ ಯೋಜನೆಗಳಡಿ ನೀಡಲಾಗುತ್ತಿದ್ದ ಹೆಚ್ಚುವರಿ ₹4,000 ಸಹಾಯಧನವನ್ನು ಮರುಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.ಟ್ರಾನ್ಸ್‌ಫಾರ್ಮರ್ ದರ ಹೆಚ್ಚಳ ಹಾಗೂ ವಿದ್ಯುತ್ ಕೊರತೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದು, ಕೆರೆಗಳ ಹೂಳೆತ್ತುವಿಕೆ ಕಾಮಗಾರಿಗಳನ್ನು ನಿರ್ಲಕ್ಷ್ಯ ಮಾಡಿರುವುದು ಬರ ನಿರ್ವಹಣೆಯ ವೈಫಲ್ಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳನ್ನು ತಕ್ಷಣ ಸಕ್ರಿಯಗೊಳಿಸಿ, ಪರ್ಯಾಯ ಬೆಳೆ ಬೀಜ, ರಸಗೊಬ್ಬರ, ಬೆಳೆ ವಿಮೆ, ಹನಿ ನೀರಾವರಿ ತಂತ್ರಜ್ಞಾನ, ಮೇವು ಬ್ಯಾಂಕ್ ಹಾಗೂ ಕುಡಿಯುವ ನೀರಿನ ಯೋಜನೆಗಳನ್ನು ಯುದ್ಧೋಪಾದಿಯಲ್ಲಿ ಜಾರಿಗೊಳಿಸುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜಗದೀಶ್ ಬೂದಿಹಾಳ, ಶಾಸಕ ವಿಠ್ಠಲ ಹಲಗೇಕರ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ ಮಾಜಿ ಶಾಸಕರಾದ ಅರವಿಂದ್ ಪಾಟೀಲ, ಪ್ರಮುಖರಾದ ಕಲ್ಲಪ್ಪ ಶಹಾಪೂರಕರ,ಈರಣ್ಣ ವಾರದ, ಶಂಕರ ಹುರಕಡ್ಲಿ, ಸಂದೀಪ ದೇಶಪಾಂಡೆ, ಮಲ್ಲಿಕಾರ್ಜುನ ಮಾದಮ್ಮನವರ, ಈರಯ್ಯ ಖೋತ, ರಾಜಶೇಖರ ಡೋಣಿ, ರೈತರು, ಪ್ರಮುಖ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.