ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಬಜೆಟ್ ಮಂಡಿಸುವಾಗ ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿ, ಶೈಕ್ಷಣಿಕ ಮತ್ತು ಪ್ರವಾಸೋದ್ಯಮ ಹಿತದೃಷ್ಟಿಯಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಸೇನಾಪಡೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ರಸ್ತೆತಡೆದು ತಮಟೆ ಚಳವಳಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ವಿಶೇಷ ಪ್ಯಾಕೇಜ್‌ಗಾಗಿ ಆಗ್ರಹಿಸಿದರು.ಈ ವೇಳೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ರಾಜ್ಯದ ತುದಿಯಲ್ಲಿರುವ ಚಾಮರಾಜನಗರ ಜಿಲ್ಲೆಗೆ ಅತೀ ಹೆಚ್ಚು ಬಾರಿ ಸಿದ್ದರಾಮಯ್ಯ ಅವರು ಬಂದಿದ್ದಾರೆ. ಅವರಿಗೆ ಜಿಲ್ಲೆಯ ನಾಡಿ ಮಿಡಿತಗೊತ್ತಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ 5 ಸಾವಿರ ಕೋಟಿ ರು.ಗಳ ವಿಶೇಷ ಅನುದಾನವನ್ನು ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಚಾವರಾಜನಗರದಲ್ಲಿರುವ ವಿಶ್ವವಿದ್ಯಾಲಯ ನೆಪಕ್ಕೆ ಮಾತ್ರ ಇದ್ದು ಅನೇಕ ಕೋರ್ಸ್‌ಗಳು ಬರಬೇಕಿದೆ. ಈ ಬಜೆಟ್‌ನಲ್ಲಿ ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ 100ಕೋಟಿ ರು. ಕೊಡಬೇಕು, ಶಿಕ್ಷಣ ಕ್ಷೇತ್ರಕ್ಕೆ ಒತ್ತುಕೊಡುವ ಅಗತ್ಯವಿದೆ. ಬೇರೆ ವಿಶ್ವವಿದ್ಯಾನಿಲಯಗಳಿಗೆ ಕೊಡುವಂತೆ ಇಲ್ಲಿಗೂ ಅನುದಾನ ಕೊಡಬೇಕು ಎಂದರು,
ಜಿಲ್ಲೆಯ ಕೆಲವು ಕೆರೆಗಳಿಗೆ ಮಾತ್ರ ನೀರುತುಂಬಿಸಲಾಗಿದೆ. ಆದ್ದರಿಂದ ಜಿಲ್ಲೆಯ ಎಲ್ಲ ಕೆರೆಗಳಿಗೂ ನೀರು ತುಂಬಿಸುವ ನಿಟ್ಟಿನಲ್ಲಿ ಅನುದಾನ ಮೀಸಲಿಡಬೇಕು. ಚಾಮರಾಜನಗರ ಪಟ್ಟಣಕ್ಕೆ 2ನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಟಾನ ಮಾಡಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿದ್ದು ಪ್ರವಾಸೋದ್ಯಮ ಬೆಳವಣಿಗೆಯಾಗಬೇಕು. ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತುಕೊಡಬೇಕು. ಕೈಗಾರಿಕಾ ಪ್ರದೇಶಕ್ಕೆಅನುಮತಿಕೊಟ್ಟಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಉದ್ಯೋಗ ಸೃಷ್ಟಿ ಮಾಡಲು ಕ್ರಮವಹಿಸಬೇಕು ಎಂದರು.
ಪ್ರತಿಭಟನೆಯಲ್ಲಿ ರಾಜಗೋಪಾಲ್, ಪಣ್ಯದಹುಂಡಿರಾಜು, ನಿಜಧ್ವನಿ ಗೋವಿಂದರಾಜು, ಗು.ಪುರುಷೋತ್ತಮ, ಚಾ.ರ.ಕುಮಾರ್, ನಂಜುಂಡಸ್ವಾಮಿ, ಮಹೇಶ್‌ಗೌಡ, ವೀರಭದ್ರ, ತಾಂಡವಮೂರ್ತಿ, ಆಟೋ ನಾಗೇಶ್, ರವಿಚಂದ್ರಪ್ರಸಾದ್, ಮಂಜು, ಬೈರವ, ರಾಜಪ್ಪ, ಲಿಂಗರಾಜು ಮತ್ತಿತರರಿದ್ದರು.