ವಿಜಯನಗರಕ್ಕೆ ಸಿಗಲಿದೆಯೇ ಮೆಡಿಕಲ್‌ ಕಾಲೇಜು?

| Published : Feb 14 2024, 02:17 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟನಲ್ಲಿ ಮೆಡಿಕಲ್‌ ಕಾಲೇಜಿಗಾಗಿ ಮೂಲ ಸೌಕರ್ಯಕ್ಕಾಗಿ ಬಜೆಟ್‌ನಲ್ಲಿ ಹಣ ಮೀಸಲಿಡಲಿದ್ದಾರೆಯೇ ಎಂಬ ಆಶಯವೂ ಮೊಳೆತಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ವಿಜಯನಗರ ಜಿಲ್ಲೆ ರಚನೆಯಾಗಿ ಮೂರು ವರ್ಷ ಉರುಳಿದ್ದು, ಜಿಲ್ಲೆಗೊಂದು ಮೆಡಿಕಲ್‌ ಕಾಲೇಜು ನೀತಿಯಂತೆ ಹೊಸ ಜಿಲ್ಲೆ ವಿಜಯನಗರಕ್ಕೂ ಹೊಸದಾಗಿ ಮೆಡಿಕಲ್ ಕಾಲೇಜು ಆರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ಅನುದಾನ ಮೀಸಲಿಡಲಿದ್ದಾರೆಯೇ? ಎಂಬ ನಿರೀಕ್ಷೆ ಗರಿಗೆದರಿದೆ.

ವಿಜಯನಗರ ಜಿಲ್ಲೆಗೆ ಮೆಡಿಕಲ್‌ ಕಾಲೇಜಿನ ಅಗತ್ಯ ಇದೆ. ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆಯನ್ನೂ ನಿರ್ಮಾಣ ಮಾಡಲಾಗುತ್ತಿದೆ. ಹಾಗಾಗಿ ಜಿಲ್ಲೆಯ ಜನರು ಉತ್ತಮ ಆರೋಗ್ಯ ಸೇವೆಗಾಗಿ ದಾವಣಗೆರೆ, ಕೊಪ್ಪಳ, ಬಳ್ಳಾರಿ, ಹಾವೇರಿ ಮತ್ತು ಗದಗ ಜಿಲ್ಲೆಯನ್ನು ಆಶ್ರಯಿಸುವ ಸ್ಥಿತಿ ಇದೆ. ಇನ್ನೂ ಹಲವರು ಹುಬ್ಬಳ್ಳಿ ಕಿಮ್ಸ್‌ಗೂ ತೆರಳುತ್ತಿದ್ದಾರೆ. ಹಾಗಾಗಿ ವಿಜಯನಗರ ಜಿಲ್ಲೆಯಲ್ಲೇ ಹೊಸ ಮೆಡಿಕಲ್‌ ಕಾಲೇಜು ಆರಂಭವಾಗಲಿ ಎಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೆಡಿಕಲ್‌ ಕಾಲೇಜಿಗಾಗಿ ಮೂಲ ಸೌಕರ್ಯಕ್ಕಾಗಿ ಬಜೆಟ್‌ನಲ್ಲಿ ಹಣ ಮೀಸಲಿಡಲಿದ್ದಾರೆಯೇ ಎಂಬ ಆಶಯವೂ ಮೊಳೆತಿದೆ.

600 ಹಾಸಿಗೆ ಮುಖ್ಯ: ಈಗ ಕೇಂದ್ರ ಸರ್ಕಾರದ ನೀತಿ ಅನ್ವಯ ಹೊಸದಾಗಿ ಮೆಡಿಕಲ್‌ ಕಾಲೇಜು ಆರಂಭಕ್ಕೆ 600 ಹಾಸಿಗೆ ಮುಖ್ಯವಾಗಿದೆ. ಹಾಗಾಗಿ ಈಗ ಜಿಲ್ಲೆಯಲ್ಲಿ ಹೊಸದಾಗಿ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣವಾಗುತ್ತಿದೆ. ಇದಕ್ಕೆ ₹104 ಕೋಟಿ ವೆಚ್ಚದಲ್ಲಿ 250 ಹಾಸಿಗೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಆಸ್ಪತ್ರೆ ಕಟ್ಟಡದಲ್ಲೇ ಇನ್ನೂ 150 ಹಾಸಿಗೆಗಳನ್ನು ನಿರ್ಮಿಸಲು ಇನ್ನೂ ₹40 ಕೋಟಿ ವೆಚ್ಚವಾಗಲಿದೆ. ಜತೆಗೆ ಆಸ್ಪತ್ರೆಗೆ ಬೇಕಾಗುವ ಇಕ್ಯುಪ್‌ಮೆಂಟ್‌ಗೆ ₹50 ಕೋಟಿ ಬೇಕಾಗಲಿದೆ. ₹90 ಕೋಟಿಗಾಗಿ ಕೆಎಂಇಆರ್‌ಸಿಗೆ ಗಣಿ ಪುನಶ್ಚೇತನಾ ಹಣದಲ್ಲಿ ಅನುದಾನ ಪಡೆಯಲು ಜಿಲ್ಲಾಡಳಿತ ಪ್ರಸ್ತಾವನೆ ಕೂಡ ಕಳುಹಿಸಿದೆ.

ಈ ಕಾರ್ಯ ಕೈಗೂಡಿದರೆ 400 ಹಾಸಿಗೆ ಜಿಲ್ಲಾಸ್ಪತ್ರೆಯಲ್ಲೇ ದೊರೆಯಲಿದೆ. ಇನ್ನು ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಇನ್ನೂ 150 ಹಾಸಿಗೆ ಹೆಚ್ಚಳ ಮಾಡಿದರೆ 550 ಹಾಸಿಗೆ ದೊರೆಯಲಿದೆ. ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಈಗ 60 ಹಾಸಿಗೆಗಳಿವೆ. ಈ ಆಸ್ಪತ್ರೆಯಲ್ಲಿ ಇನ್ನೂ 40 ಹಾಸಿಗೆ ಹೆಚ್ಚಳ ಮಾಡಿದರೆ 100 ಹಾಸಿಗೆ ದೊರೆಯಲಿದೆ. ಆಗ 650 ಹಾಸಿಗೆ ದೊರೆತಂತಾಗುತ್ತದೆ. ಮೆಡಿಕಲ್ ಕಾಲೇಜಿಗೆ ಬೇಕಾದ ಮೂಲ ಸೌಕರ್ಯ ಕಲ್ಪಿಸಲು ಜಿಲ್ಲಾಡಳಿತದ ಬಳಿ ಪ್ರಸ್ತಾವನೆ ಇದೆ. ಆದರೆ, ಅದಕ್ಕೆ ತಕ್ಕಂತೆ ಅನುದಾನದ ನಿರೀಕ್ಷೆ ಬೇಕಿದೆ.ಜಾಗವೂ ಲಭ್ಯ: ಜಿಲ್ಲಾಸ್ಪತ್ರೆ ನಿರ್ಮಾಣಕ್ಕಾಗಿ ನಗರಸಭೆ ಐದು ಎಕರೆ ಜಾಗ ನೀಡಿದೆ. ಇನ್ನೂ 45 ಎಕರೆ ಜಾಗ ಅದೇ ಪ್ರದೇಶದಲ್ಲಿ ಲಭ್ಯವಿದೆ. ಮೆಡಿಕಲ್‌ ಕಾಲೇಜು ಮಂಜೂರಾದರೆ, ವಸತಿಗೃಹಗಳು, ವಿವಿಧ ಪ್ರಯೋಗಾಲಯಗಳು ಸೇರಿದಂತೆ ಮೆಡಿಸಿಟಿ ನಿರ್ಮಾಣಕ್ಕೆ ಜಾಗವೂ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೆಡಿಕಲ್‌ ಕಾಲೇಜು ನಿರ್ಮಾಣಕ್ಕಾಗಿ ಮೂಲ ಸೌಕರ್ಯ ಕಲ್ಪಿಸಲು ಅನುದಾನ ಒದಗಿಸಿದರೆ, ಒಳಿತಾಗಲಿದೆ.

ಜಿಲ್ಲೆಯಲ್ಲಿ ಅಪೌಷ್ಟಿಕತೆ, ರಕ್ತಹೀನತೆಯಿಂದ ಬಳಲುವವರ ಸಂಖ್ಯೆಗೂ ಕೊರತೆ ಇಲ್ಲ. ಇನ್ನು ಗಣಿಪ್ರದೇಶದ ಹಿನ್ನೆಲೆಯಲ್ಲಿ ಕೆಮ್ಮು, ದಮ್ಮು ಪ್ರಕರಣಗಳು ಕಾಣಿಸುತ್ತಿವೆ. ಹಾಗಾಗಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲೆ ಭಾರೀ ಒತ್ತಡವೂ ಇದೆ. ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡಿದರೆ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಸಮುದಾಯ ಆರೋಗ್ಯ ಕೇಂದ್ರಗಳನ್ನು ಹೆಚ್ಚಳ ಮಾಡಬೇಕಿದೆ. ಜನರ ಆರೋಗ್ಯ ಬಲವರ್ಧನೆಗೆ ಸರ್ಕಾರ ಹೊಸ ಪೈಲೆಟ್‌ ಯೋಜನೆ ಜಾರಿ ಮಾಡಿದರೆ, ಜಿಲ್ಲೆಯನ್ನು ಪರಿಗಣಿಸಬೇಕು. ಜಿಲ್ಲೆಯ ಆರೋಗ್ಯ ಇಲಾಖೆ ಬಲಗೊಳಿಸಲು ಬಜೆಟ್‌ನಲ್ಲಿ ವಿಶೇಷ ಅನುದಾನ ದೊರೆಯಲಿದೆಯೇ? ಎಂಬುದನ್ನು ಕಾದು ನೋಡಬೇಕಿದೆ.

ಅನುದಾನ ನೀಡಲಿ: ವಿಜಯನಗರ ಜಿಲ್ಲೆಗೆ ಮೂರು ವರ್ಷಗಳಾಗಿದೆ. ಹಾಗಾಗಿ ಹೊಸ ಜಿಲ್ಲೆಗೆ ಮೆಡಿಕಲ್‌ ಕಾಲೇಜಿನ ಅಗತ್ಯ ಇದೆ. ಜಿಲ್ಲೆಯ ಆರು ತಾಲೂಕುಗಳ ಜನರ ಹಿತದೃಷ್ಟಿಯಿಂದ ಜಿಲ್ಲಾಸ್ಪತ್ರೆಯನ್ನು 400 ಹಾಸಿಗೆ ಆಸ್ಪತ್ರೆಯನ್ನಾಗಿಸಬೇಕು. ಈಗ 250 ಹಾಸಿಗೆ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಮೆಡಿಕಲ್‌ ಕಾಲೇಜು ದೃಷ್ಟಿಕೋನದೊಂದಿಗೆ ಕಟ್ಟಡ ನಿರ್ಮಾಣ ಮಾಡಿದರೆ ಜಿಲ್ಲೆಗೆ ಅನುಕೂಲವಾಗಲಿದೆ. ಹೊಸ ಜಿಲ್ಲೆಯ ಜನರ ಆರೋಗ್ಯ ದೃಷ್ಟಿಯಿಂದ ಮೆಡಿಕಲ್‌ ಕಾಲೇಜಿಗಾಗಿ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಬಜೆಟ್‌ನಲ್ಲಿ ಅನುದಾನ ಒದಗಿಸಲಿ ಎಂದು ಭಗತ್‌ ಸಿಂಗ್‌ ರಕ್ತದಾನಿಗಳ ಸಂಘದ ಅಧ್ಯಕ್ಷ ಕೆ.ಎಂ. ಸಂತೋಷ್‌ ಆಗ್ರಹಿಸಿದರು.