ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಪರಿಶಿಷ್ಟ ಪಂಗಡದ ಹಕ್ಕಿಪಿಕ್ಕಿ ಜನಾಂಗದವರನ್ನು ಕಾನೂನು ಬಾಹಿರವಾಗಿ ಮತಾಂತರ ಮಾಡುತ್ತಿರುವುದು, ಸ್ಮಶಾನ ಸೇರಿದಂತೆ 2 ಕಡೆ ಅನಧಿಕೃತ ಚರ್ಚ್ ನಿರ್ಮಿಸುತ್ತಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ನೇತೃತ್ವದಲ್ಲಿ ಹಕ್ಕಿಪಿಕ್ಕಿ ಜನಾಂಗದವರು ನಗರದಲ್ಲಿ ಮಂಗಳವಾರ ಪ್ರತಿಭಟಿಸಿದರು.ನಗರದ ಜಿಲ್ಲಾಡಳಿತ ಭವನದ ಎದುದು ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ, ಚನ್ನಗಿರಿ ತಾ. ಹಕ್ಕಿ ಪಿಕ್ಕಿ ಅಲೆಮಾರಿಗಳ ಸಂಘದ ಮುಖಂಡ ಗಂಡುಗಲಿ ನೇತೃತ್ವದಲ್ಲಿ ಚನ್ನಗಿರಿ. ಅಸ್ತಾಫನಹಳ್ಳಿ ಗ್ರಾಮದಲ್ಲಿ ಹೆಚ್ಚುತ್ತಿರುವ ಮತಾಂತರ ಚಟುವಟಿಕೆ ತಡೆದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಹಕ್ಕಿಪಕ್ಕಿ ಜನಾಂಗದವರು ಮನವಿ ಅರ್ಪಿಸಿದರು.
ಇದೇ ವೇಳೆ ಮಾತನಾಡಿದ ಸಂಘದ ಹುಚ್ಚವ್ವನಹಳ್ಳಿ ಮಂಜುನಾಥ, ಹಕ್ಕಿಪಿಕ್ಕಿ ಮುಖಂಡ ಗಂಡುಗಲಿ, ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಚನ್ನಗಿರಿ ತಾ. ಅಸ್ತಾಫನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಅಲೆಮಾರಿ ಜನಾಂಗವಾದ ಹಕ್ಕಿಪಿಕ್ಕಿ ಸಮುದಾಯದವರಿಗೆ ಇಲ್ಲಸಲ್ಲದ ಆಸೆ, ಆಮಿಷಗಳನ್ನು ತೋರಿಸಿ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಅಪಪ್ರಚಾರ, ಸುಳ್ಳು ಹೇಳಿ, ಹಣದ ಆಸೆ ತೋರಿಸಿ ಜಗತ್ತಿಗೆ ಯೇಸು ಕ್ರಿಸ್ತರನ್ನು ಬಿಟ್ಟರೆ ಬೇರಾವುದೇ ದೇವರೂ ಇಲ್ಲವೆಂದು ಹೇಳುತ್ತಾ ಮತಾಂತರ ಮಾಡಲಾಗುತ್ತಿದೆ. ಈಗಾಗಲೇ ಗ್ರಾಮದ ಸರ್ಕಾರಿ ಸ್ಮಶಾನದಲ್ಲಿ ಅನಧಿಕೃತವಾಗಿ ಚರ್ಚ್ ನಿರ್ಮಿಸಿದ್ದಾರೆ. ಈಗ ಗ್ರಾಮದಲ್ಲಿ ಮತ್ತೊಂದು ಚರ್ಚ್ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ದೂರಿದರು.
ಪುಟ್ಟದಾದ ಅಸ್ತಾಫನಹಳ್ಳಿ 2 ಚರ್ಚ್ ನಿರ್ಮಾಣ ಮಾಡುವ ಮೂಲಕ ಇಡೀ ಹಳ್ಳಿಗೆ ಹಳ್ಳಿಯನ್ನೇ, ಇಡೀ ಹಕ್ಕಿಪಿಕ್ಕಿ ಜನಾಂಗದವರನ್ನೇ ಸಂಪೂರ್ಣ ಮತಾಂತರ ಮಾಡುವ ದುರುದ್ದೇಶ ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಪರಿಣಾಮ ಗ್ರಾಮದ ಜನರ ನೆಮ್ಮದಿ ಹಾಳಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಮತಾಂತರ ತಡೆ ಕಾಯ್ದೆ ಉಲ್ಲಂಘಿಸಿ ಜನರಿಗೆ ಇಲ್ಲದ ಆಸೆ, ಆಮಿಷ ತೋರಿಸಿ ಬಲವಂತದ ಮತಾಂತರ ಮಾಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಹಿಂದೆ ಇದೇ ಚರ್ಚ್‌ನವರನ್ನು ತಹಸೀಲ್ದಾರ್ ಕೋರ್ಟಿಗೆ ಕರೆಸಿ ವಿಚಾರಣೆ ಸಹ ಮಾಡಲಾಗಿತ್ತು. ಆಗ ಇನ್ನು ಮುಂದೆ ಯಾರ ಮನೆಗೂ ಹೋಗಿ ಮತ ಪ್ರಚಾರ ಮಾಡುವುದಿಲ್ಲ. ಚರ್ಚ್ ಬಳಿಗೆ ಯಾರನ್ನೂ ಕರೆಯುವುದಿಲ್ಲ ಎಂಬುದಾಗಿ ಮತಾಂತರ ಮಾಡುತ್ತಿರುವವರು ಮುಚ್ಚಳಿಕೆ ಬರೆದು ಕೊಟ್ಟಿದ್ದರು. ಅಷ್ಟೇ ಅಲ್ಲ, ಅಂದು ಇಡೀ ಗ್ರಾಮಸ್ಥರ ಬಳಿ ಕ್ಷಮೆಯಾಚಿಸಿದ್ದರು. ಈಗ ಎರಡೂ ಚರ್ಚ್‌ನವರು ಮತ್ತೆ ಮತಾಂತರಕ್ಕೆ ಕೈಹಾಕಿದ್ದು, ಹಕ್ಕಿಪಿಕ್ಕಿ ಜನರಿಗೆ ಆಮಿಷವೊಡ್ಡುತ್ತಿದ್ದು, ಇಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಮಾತನಾಡಿ, ಸ್ಥಳದಲ್ಲೇ ಇದ್ದ ಗಾಂಧಿ ನಗರ ಠಾಣೆಯ ಪೊಲೀಸರನ್ನು ಕರೆದು ಚನ್ನಗಿರಿ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಲು ಅಲ್ಲಿನ ಅಧಿಕಾರಿಗಳಿಗೆ ಸೂಚಿಸಿದರಲ್ಲದೇ, ಸೆ.12ರಂದು ಚನ್ನಗಿರಿ ತಾ. ಅಸ್ತಾಫನಹಳ್ಳಿ ಗ್ರಾಮಕ್ಕೆ ಖುದ್ದಾಗಿ ತಾವೇ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.ರೈತ ಸಂಘದ ಹೂವಿನಮಡು ನಾಗರಾಜ, ಚಿನ್ನಸಮುದ್ರ ಭೀಮಾನಾಯ್ಕ, ಉಮೇಶ, ಅಸ್ತಾಫನಹಳ್ಳಿ ಗ್ರಾಮದ ಮುಖಂಡರಾದ ಗುರುನಾಥ, ಲಿಂಗಣ್ಣ, ಮಧುಸೂದನ, ಡಿಯಾಸ್ ಬಾಬು, ಸಂತೋಷ್, ಬಾಬು, ಪಪ್ಪಿ, ಶೈಲಾ, ಲೀಲಾವತಿ, ಮಹಾತ್ಮೆ, ಗುಣಸುಂದರಿ, ವಿಜಯಾ, ಕಲ್ಲೇಶ್ ಅನೇಕರು ಭಾಗವಹಿಸಿದ್ದರು.