ಆಲ್ದೂರು ಹಲವಾರು ವರ್ಷಗಳಿಂದ ಆಲ್ದೂರು ಗ್ರಾಮ ಪಂಚಾಯಿತಿಯಲ್ಲಿ ಹಂಗಾಮಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 10 ಮಂದಿ ನೀರುಗಂಟಿಗಳು ಹಾಗೂ ಇಬ್ಬರು ಪೌರ ಕಾರ್ಮಿಕರು ಸೇರಿದಂತೆ 12 ಮಂದಿಯನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಲ್ದೂರು ಗ್ರಾಮ ಪಂಚಾಯಿತಿ ಕಚೇರಿ ಎದುರು ಹೋರಾಟ

ಕನ್ನಡಪ್ರಭ ವಾರ್ತೆ ಆಲ್ದೂರು

ಹಲವಾರು ವರ್ಷಗಳಿಂದ ಆಲ್ದೂರು ಗ್ರಾಮ ಪಂಚಾಯಿತಿಯಲ್ಲಿ ಹಂಗಾಮಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 10 ಮಂದಿ ನೀರುಗಂಟಿಗಳು ಹಾಗೂ ಇಬ್ಬರು ಪೌರ ಕಾರ್ಮಿಕರು ಸೇರಿದಂತೆ 12 ಮಂದಿಯನ್ನು ಏಕಾಏಕಿ ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಅಂಬೇಡ್ಕರ್ ಹೋರಾಟ ವೇದಿಕೆ ಅಧ್ಯಕ್ಷ ಎಚ್. ನವರಾಜು ಮಾತನಾಡಿ ಆಗಸ್ಟ್‌ನಲ್ಲಿ ಹಂಗಾಮಿ ನೌಕರರಿಗೆ ದೂರವಾಣಿ ಮೂಲಕ ಕರೆ ಮಾಡಿ ಕಾರ್ಯನಿರ್ವಹಣಾಧಿಕಾರಿಗಳ ಸೂಚನೆಯಂತೆ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.

ಅಲ್ಲದೆ, ಬಾಕಿ ವೇತನವನ್ನೂ ಪಾವತಿಸಿಲ್ಲ. ಜಿಲ್ಲೆಯ 47 ಪಂಚಾಯಿತಿಗಳ ಪೈಕಿ ಆಲ್ದೂರು ಪಂಚಾಯಿತಿಯಲ್ಲಿ ಮಾತ್ರ ಈ ರೀತಿ ಕ್ರಮ ಕೈಗೊಂಡಿರುವುದು ಕಾನೂನುಬದ್ಧವೇ ಎಂದು ಪ್ರಶ್ನಿಸಿದರು.ಮುಖಂಡ ಎ.ಯು. ಇಬ್ರಾಹಿಂ, ದಿನಗೂಲಿ ಆಧಾರದ ಹಂಗಾಮಿ ನೌಕರರನ್ನು ಏಕಾಏಕಿ ವಜಾಗೊಳಿಸಿರುವುದು ಖಂಡನೀಯ ಎಂದರು. ಅರೇನೂರು ಸುಪ್ರೀತ್, ಇದೇ ಉದ್ಯೋಗವನ್ನು ನಂಬಿಕೊಂಡು ಸಂಘ-ಸಂಸ್ಥೆಗಳಲ್ಲಿ ಸಾಲ ಪಡೆದಿರುವ ನೌಕರರ ಕುಟುಂಬಗಳ ಜೀವನ ನಿರ್ವಹಣೆ ಕಷ್ಟಕರವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪಿಡಿಒ ಶಂಶೂನ್ ನಹರ್ ಮಾತನಾಡಿ, ಮೇಲಾಧಿಕಾರಿಗಳ ಸೂಚನೆಯಂತೆ ನೌಕರರನ್ನು ವಜಾಗೊಳಿಸಲಾಗಿದ್ದು, ಅವರೊಂದಿಗೆ ಚರ್ಚಿಸುವಂತೆ ತಿಳಿಸಿದರು.ಗಿರೀಶ್ ದೊಡ್ಡಮಾಗರವಳ್ಳಿ ಮಾತನಾಡಿ, ನೌಕರರಿಗೆ ಯಾವುದೇ ಆದೇಶ ಪತ್ರ ನೀಡದೆ ದೂರವಾಣಿ ಮೂಲಕ ಕೆಲಸ ದಿಂದ ವಜಾಗೊಳಿಸಿರುವುದು ಸೂಕ್ತ ಕಚೇರಿ ಕ್ರಮವಲ್ಲ. ಆಲ್ದೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಜನಸಾಂದ್ರತೆ ಇರುವ ವಾರ್ಡ್‌ಗಳಿದ್ದು, ಈ ಹಿಂದೆ ಸಾರ್ವಜನಿಕರ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಹಂಗಾಮಿ ನೌಕರರನ್ನು ನೇಮಿಸ ಲಾಗಿತ್ತು. ಹುದ್ದೆಗಳನ್ನು ಕಡಿತಗೊಳಿಸಿದರೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಹೇಳಿದರು.ಡಿಎಸ್ಎಸ್ ಮುಖಂಡ ಹೊನ್ನಪ್ಪ, ಹಂಗಾಮಿ ನೌಕರರ ವಜಾ ಆದೇಶವನ್ನು ವಾಪಸ್ ಪಡೆದು ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.ಬಳಿಕ ಆಡಳಿತಾಧಿಕಾರಿ ರುದ್ರಪ್ಪ ಟಿ.ಆರ್. ಹಾಗೂ ಸಹಾಯಕ ನಿರ್ದೇಶಕ ಅಶೋಕ್ ಸ್ಥಳಕ್ಕೆ ಭೇಟಿ ನೀಡಿದರು. ನಂತರ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನಾ ಅವರನ್ನು ಭೇಟಿ ಮಾಡಿ ಸಮಸ್ಯೆ ವಿವರಿಸಲು ಮುಖಂಡರ ನಿಯೋಗ ಚಿಕ್ಕಮಗಳೂರಿಗೆ ತೆರಳಲು ತೀರ್ಮಾನಿಸಿತು.ಪ್ರತಿಭಟನೆಯಲ್ಲಿ ನಾಗೇಶ್ ದೋಣಗುಡಿಗೆ, ಪಂಚಾಯಿತಿ ಮಾಜಿ ಸದಸ್ಯರಾದ ಸವಿತಾ, ಭರತ್ ಎ.ಬಿ., ಲಕ್ಷ್ಮಿ, ರಾಜು, ಡಿಎಸ್ಎಸ್ ಜಿಲ್ಲಾ ಸಂಚಾಲಕ ತುಡುಕೂರು ಯೋಗೇಶ್, ಬಿಎಸ್ಪಿ ಮುಖಂಡರಾದ ಮಲ್ಲಿಕಾರ್ಜುನ್, ವಸಂತ್, ಮನು, ಚಂದು ಹಾಗೂ ಸುಂದರ್ ಗಾಳಿಗಂಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.