ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಖಂಡಿಸಿ ಪ್ರತಿಭಟನೆ

| Published : Aug 21 2024, 12:40 AM IST

ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಖಂಡಿಸಿ ಸುವರ್ಣ ಕನ್ನಡ ರಕ್ಷಣಾ ವೇದಿಕೆ ವತಿಯಿಂದ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಇಲ್ಲಿನ ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಖಂಡಿಸಿ ಸುವರ್ಣ ಕನ್ನಡ ರಕ್ಷಣಾ ವೇದಿಕೆ ವತಿಯಿಂದ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಟಿ.ವಿ.ಸಿದ್ದರಾಜು ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ನಗರಸಭೆ ಮುಂಭಾಗಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ ಪೌರಾಯುಕ್ತ ರಾಮದಾಸ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ವೇದಿಕೆ ಜಿಲ್ಲಾಧ್ಯಕ್ಷ ಟಿ.ವಿ.ಸಿದ್ದರಾಜು ಮಾತನಾಡಿ, ನಗರಸಭೆಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ಯಾವುದು ಸರಿಯಾಗಿ ನಡೆಯುತ್ತಿಲ್ಲ. ಸಾರ್ವಜನಿಕರು ಇ-ಸ್ವತ್ತು ಮಾಡಲು ಅಧಿಕಾರಿಗಳು ಕೇಳಿದ ದಾಖಲೆಗಳನ್ನು ಒದಗಿಸಿದರೂ ಯಾವುದೇ ಕೆಲಸ ಆಗುತ್ತಿಲ್ಲ. ನಿಯಮದ ಪ್ರಕಾರ ನಾವು ದಾಖಲಾತಿಗಳನ್ನು ಕೊಟ್ಟ 45 ದಿನಗಳಲ್ಲಿ ಇ-ಸ್ವತ್ತು ಮಾಡಿಕೊಡಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ ಆದರೂ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ದೂರಿದರು.

ನಗರಸಭೆಯಲ್ಲಿ ಸಾರ್ವಜನಿಕರ ಬದಲು ಬರೀ ದಲ್ಲಾಳಿಗಳೆ ಅಡ್ಡಾಡುತ್ತಿದ್ದಾರೆ. ಇ-ಸ್ವತ್ತು ಮಾಡಿಕೊಡಲು ಸಾರ್ವಜನಿಕರಿಂದ 20-25 ಸಾವಿರ ರು.ಗಳನ್ನು ವಸೂಲಿ ಮಾಡುತ್ತಿದ್ದಾರೆ. ದಲ್ಲಾಳಿಗಳಿಗೆ ಹಣ ಕೊಟ್ಟರೆ ದಲ್ಲಾಳಿಗಳ ಮುಖಾಂತರ ಇ-ಸ್ವತ್ತು ಒಂದು ತಿಂಗಳಲ್ಲೇ ಆಗುತ್ತದೆ. ಆದರೆ ಸಾರ್ವಜನಿಕರು ಕೊಟ್ಟ ಇ-ಸ್ವತ್ತಿನ ಅರ್ಜಿಗಳೇ ಕಣ್ಮರೆ ಆಗುತ್ತಿವೆ. ದಲ್ಲಾಳಿಗಳೊಂದಿಗೆ ಅಧಿಕಾರಿಗಳು ಶಾಮೀಲಾಗಿ ಲಂಚ ಪಡೆದು ಕೆಲಸ ಮಾಡಿಕೊಡುತ್ತಿವುದೇ ಇದಕ್ಕೆಲ್ಲ ಕಾರಣ ಎಂದು ಆರೋಪಿಸಿದರು.

ಸಾರ್ವಜನಿಕರು ನಗರಸಭೆಗೆ ಸುತ್ತಿ-ಸುತ್ತಿ ಬೇಸರಗೊಂಡು ನಗರಸಭೆಯ ಸಹವಾಸವೇ ಬೇಡವೆಂದು ಬೇಸತ್ತು ಹೋಗಿದ್ದು, ನಗರಸಭೆಯ ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಿದ್ದಾರೆ. ಇದರಿಂದ ನಗರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಾ-ನಗರದಲ್ಲಿ ಸಂಪಿಗೆ ರಸ್ತೆ ಮತ್ತು ಭ್ರಮರಾಂಭ ಬಡಾವಣೆಯ 1ನೇ ಕ್ರಾಸ್‌ನಲ್ಲಿ ಒಳಚರಂಡಿ ವ್ಯವಸ್ಥೆ ಅಸ್ತವ್ಯಸ್ತ ಆಗಿದ್ದು, ಮಳೆ ಬಂದರೆ ಚರಂಡಿಯ ಬದಲು ರಸ್ತೆಗಳಲ್ಲಿ ನೀರು ನದಿಯಂತೆ ಹರಿಯುತ್ತಿವೆ. ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಆಪಾದಿಸಿದರು.

ಒಳ ಚರಂಡಿ ಮತ್ತು ಈ ಹಿಂದೆ ಇದ್ದಂತಹ ದೊಡ್ಡ ಚರಂಡಿಯನ್ನು 2X2 ಅಡಿ ಚರಂಡಿ ಮಾಡಿರುವುದರಿಂದ ಈ ಚರಂಡಿಯ ನೀರು ತುಂಬಿ 16ನೇ ವಾರ್ಡಿನ ಜನವಸತಿ ಕೇಂದ್ರ ಆದಂತಹ ರೈಲ್ವೇ ಬಡಾವಣೆಯ ಉಪ್ಪಾರಬೀದಿ ಮತ್ತು ನಾಯಕರು ಬೀದಿಗಳ ಭಾಗದಲ್ಲಿ ಮಳೆ ಬಂದರೆ ಮನೆಗಳಿಗೆ ಚರಂಡಿ ನೀರು ತುಂಬಿ ನಿವಾಸಿಗಳಿಗೆ ತುಂಬಾ ಕಿರಿಕಿರಿ ಉಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದ 209ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್‌ಗಳಲ್ಲಿ ಬೀದಿ ದೀಪಗಳ ಕಂಬಗಳು ಹಾಕಿದ್ದು ಸಂತೇಮರಹಳ್ಳಿ ವೃತ್ತದಿಂದ ಸಂತೇಮರಹಳ್ಳಿಗೆ ಹೋಗುವ ರಸ್ತೆ ಮತ್ತು ಮೈಸೂರು ರಸ್ತೆ, ಫಾರೆಸ್ಟ್ ಸರ್ಕಲ್‌ನಿಂದ ಸತ್ತಿ ಮಂಗಲದ ರಸ್ತೆಯಲ್ಲಿ ಬರೀ ಕಂಬಗಳನ್ನು ಅಳವಡಿಸಿ ಯಾವುದೇ ಬೀದಿದೀಪ ಸಂಪರ್ಕ ಕೊಟ್ಟಿಲ್ಲ. ಇದರಿಂದ ಈ ರಸ್ತೆಗಳಲ್ಲಿ ರಾತ್ರಿ 7 ಗಂಟೆ ನಂತರ ಹೆಂಗಸರು, ಮಕ್ಕಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಮತ್ತು ಭಯದಿಂದ ಓಡಾಡಬೇಕಾದ ದುಸ್ಧಿತಿ ಉದ್ಭವವಾಗಿದೆ. ಇದಕ್ಕೆಲ್ಲ ನಗರಸಭೆಯ ಅಧಿಕಾರಿಗಳ ಬೇಜಾವಾಬ್ದಾರಿತನ ಮತ್ತು ಲಂಚದ ದುರಾಸೆಯೇ ಕಾರಣ ಎಂದು ಕಿಡಿಕಾರಿದರು.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಅವ್ಯವಸ್ಧೆಗಳನ್ನು ಸರಿಪಡಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ನಗರಸಭೆಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳುಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನಾರಾಯಣ್, ವೇದಿಕೆ ಯ ಜಿಲ್ಲಾ ಗೌರವಾಧ್ಯಕ್ಷ ಮಸಣಶೆಟ್ಟಿ, ಉಪಾಧ್ಯಕ್ಷ ಕೆ.ಟಿ.ಆನಂದ್, ಟೌನ್ ಉಪಾಧ್ಯಕ್ಷ ಯೋಗೇಶ್, ತಾಲೂಕು ಅಧ್ಯಕ್ಷ ಶಿವಣ್ಣ, ಆಟೋ ಸಂಘದ ಉಪಾಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಗೋವಿಂದ ನಾಯಕ, ಮಂಜು, ರಾಜೇಂದ್ರ, ಚೆನ್ನುಗಶೆಟ್ಟಿ, ಅನಿಲ್ ನಾಯಕ್ ಮತ್ತಿತರರಿದ್ದರು.