ವಸತಿ ನಿಲಯದಿಂದ ವಿದ್ಯಾರ್ಥಿಗಳನ್ನು ಖಾಲಿ ಮಾಡುವ ಆದೇಶ ಖಂಡಿಸಿ ಪ್ರತಿಭಟನೆ

| Published : May 23 2024, 01:05 AM IST

ವಸತಿ ನಿಲಯದಿಂದ ವಿದ್ಯಾರ್ಥಿಗಳನ್ನು ಖಾಲಿ ಮಾಡುವ ಆದೇಶ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರು ನಗರದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ ಮುಂದೆ ಡಾ.ಅಂಬೇಡ್ಕರ್ ವೃತ್ತಿಪರ ವಸತಿ ನಿಲಯದ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಸ್ಥಳೀಯ ಗದ್ವಾಲ್ ರಸ್ತೆಯಲ್ಲಿರುವ ಡಾ.ಅಂಬೇಡ್ಕರ್ ವೃತ್ತಿಪರ ವಸತಿ ನಿಲಯದಲ್ಲಿ ಮ್ಯಾನೇಜ್‌ಮೆಂಟ್ ಕೋಟಾದ ವಿದ್ಯಾರ್ಥಿಗಳನ್ನು ಮೇ 25ರೊಳಗೆ ಖಾಲಿ ಮಾಡುವಂತೆ ಆದೇಶಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಮಾವಿನಕೆರೆ ಉದ್ಯಾನವನದ ಸಮೀಪದಲ್ಲಿನ ಇಲಾಖೆ ತಾಲೂಕು ಕಚೇರಿ ಮುಂದೆ ಜಮಾಯಿಸಿದ ವಿದ್ಯಾರ್ಥಿಗಳು ವಾರ್ಡನ್‌ ಮಾಡಿರುವ ಆದೇಶದ ವಿರುದ್ಧ ಘೋಷಣೆ ಕೂಗಿದರು. ವಿದ್ಯಾರ್ಥಿಗಳ ಪ್ರವೇಶವನ್ನು ಯಥಾ ರೀತಿ ಮುಂದುವರಿಸಬೇಕು ಎಂದು ಮನವಿ ಸಲ್ಲಿಸಿದರು.

ಇದೇ ಮೇ 25ರೊಳಗೆ ಮ್ಯಾನೇಜ್‌ಮೆಂಟ್ ಕೋಟಾದ ಎಲ್ಲರೂ ಹೊರಗಡೆ ಹೋಗಬೇಕು ಎಂದು ಕಟ್ಟುನಿಟ್ಟಾಗಿ ಆದೇಶ ಮಾಡಿದ್ದಾರೆ. ಇಲ್ಲಿ ವಾಸಿಸುವ ನಾವು ಕಡು ಬಡವರಾಗಿದ್ದು, ಇಲ್ಲಿಂದ ಹೊರಗೆ ಹೋದರೆ ಮುಂದಿನ ವ್ಯಾಸಂಗಕ್ಕೆ ತೊಂದರೆಯಾಗುತ್ತದೆ ಎಂದು ಆರೋಪಿಸಿದರು.

ಇಷ್ಟೇ ಅಲ್ಲದೇ, ವಸತಿ ನಿಲಯದಲ್ಲಿ ಊಟದ ವ್ಯವಸ್ಥೆ ಸರಿಯಾಗಿಲ್ಲ. ನೀರಿನ ಸಮಸ್ಯೆ ಸಾಕಷ್ಟಿದೆ. ಸ್ವಚ್ಛತೆಯಂತೂ ಮಾಡುವವರೇ ಇಲ್ಲ. ವಿದ್ಯಾರ್ಥಿನಿಯರಿಗೆ ಸರಿಯಾದ ಸ್ನಾನದ ವ್ಯವಸ್ಥೆ ಇಲ್ಲ. ಗ್ರಂಥಾಲಯದ ವ್ಯವಸ್ಥೆ ಇಲ್ಲ. ಹೀಗಾಗಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಇದ್ದರು.