ಇಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ

| Published : Mar 06 2025, 12:32 AM IST

ಸಾರಾಂಶ

ಶಿವಮೊಗ್ಗ: ರಾಜ್ಯದ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಂಡಿಸಿ ಜೆಡಿಎಸ್ ಪಕ್ಷದಿಂದ ಮಾ.6ರಂದು ರಾಜ ವ್ಯಾಪಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯ ಅಂಗವಾಗಿ ಶಿವಮೊಗ್ಗದಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳ್ ಗೋಪಾಲ್ ತಿಳಿಸಿದರು.

ಶಿವಮೊಗ್ಗ: ರಾಜ್ಯದ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಂಡಿಸಿ ಜೆಡಿಎಸ್ ಪಕ್ಷದಿಂದ ಮಾ.6ರಂದು ರಾಜ ವ್ಯಾಪಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯ ಅಂಗವಾಗಿ ಶಿವಮೊಗ್ಗದಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳ್ ಗೋಪಾಲ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11ಕ್ಕೆ ನೆಹರು ರಸ್ತೆಯ ಜಿಲ್ಲಾ ಜೆಡಿಎಸ್ ಕಚೇರಿಯಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಗ್ಯಾರಂಟಿಗಳಿಗೆ ನೀಡಲು ಹಣವಿಲ್ಲದೆ ಪರದಾಡುತ್ತಿದೆ. ಕಳೆದ ಮೂರು ತಿಂಗಳಿಂದ ಗೃಹಲಕ್ಷ್ಮೀ ಸ್ಥಗಿತವಾಗಿದೆ. ಅನ್ನ ಭಾಗ್ಯಕ್ಕೆ ನೀಡುವ ಅಕ್ಕಿಯೂ ಇಲ್ಲ. ಹಣವೂ ಇಲ್ಲವಾಗಿದೆ. ಗುತ್ತಿಗೆದಾರರಿಗೆ ನೀಡಬೇಕಾಗದ ೩೨ ಸಾವಿರ ಕೋಟಿ ರು. ಹಣ ಇನ್ನೂ ಬಾಕಿ ಇದ್ದು, ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕಡಿತವಾಗಿದೆ. ರೈತರ ಬೇಡಿಕೆಗಳನ್ನು ಈಡೇರಿಸಿಲ್ಲ. ರೈತರ ಆತ್ಮಹತ್ಯೆ ಅವ್ಯಾಹತವಾಗಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಆಡಳಿತ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ ಎಂದು ಟೀಕಿಸಿದರು.ಜಿ.ಪಂ., ತಾಪಂ, ಪಾಲಿಕೆ, ಪುರಸಭೆ ಇತ್ಯಾದಿ ಸ್ಥಳೀಯ ಸಂಸ್ಥೆಗಳ ಯಾವುದೇ ಚುನಾವಣೆಯನ್ನೂ ನಡೆಸುತ್ತಿಲ್ಲ. ರಾಜ್ಯದಲ್ಲಿ 2 ಲಕ್ಷ 75 ಸಾವಿರ ಹುದ್ದೆ ಖಾಲಿ ಇದ್ದು ಹಣಕಾಸಿನ ಮುಗ್ಗಟ್ಟಿನಿಂದಾಗಿ ಭರ್ತಿಮಾಡಲು ಸಾಧ್ಯವಾಗುತ್ತಿಲ್ಲ. ಭರ್ತಿ ಮಾಡಿದರೂ ಸಂಬಳ ನೀಡಲು ಸರ್ಕಾರದ ಬಳಿ ಹಣವಿಲ್ಲ. ಎರಡು ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ಪ್ರಗತಿ ಇಲ್ಲ ಎಂದು ಕಿಡಿಕಾರಿದರು. ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್ ಮಾತನಾಡಿ, ವಿಶೇಷವಾಗಿ ಶಿವಮೊಗ್ಗ ನಗರದಲ್ಲಿ ಸ್ಥಳೀಯ ವಿಚಾರಗಳು ಸಾಕಷ್ಟಿದ್ದು, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವಧಿಯಲ್ಲಿ ಗೋಪಿಶೆಟ್ಟಿಕೊಪ್ಪದಲ್ಲಿ 4,700 ಆಶ್ರಯ ಮನೆಗಳು ಹಂಚಲು ಸಿದ್ಧವಾಗಿದ್ದವು. ಈಗ ಆಶ್ರಯ ಮನೆಗಳ ಹಂಚಿಕೆಯಲ್ಲಿ ಭಾರೀ ಗೋಲ್‌ಮಾಲ್ ನಡೆದಿರುವ ಮಾಹಿತಿ ಇದೆ. ಮನೆ ಸಂಖ್ಯೆಕೊಡಿಸಲು ಫಲಾನುಭವಿಗಳಿಂದ 25-50 ಸಾವಿರ ರು.ವರೆಗೆ ಕಿಡಿಗೇಡಿಗಳು ಹಣ ಪಡೆದಿರುವ ಬಗ್ಗೆಯೂಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ಗೊಂದಲವನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ರಾಕೇಶ್ ಡಿಸೋಜ, ಜಿಲ್ಲಾ ಕಾರ್‍ಯಾಧ್ಯಕ್ಷ ದಾದಾಪೀರ್, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ತ್ಯಾಗರಾಜ್, ಮಧು ಕುಮಾರ್, ಗೀತಾ ಸತೀಶ್, ಸಂಗಯ್ಯ, ನಿಖಿಲ್, ಗಂಧದಮನೆ ನರಸಿಂಹ, ಅಬ್ದುಲ್ ವಾಜಿದ್ ಇನ್ನಿತರರಿದ್ದರು.