ಸಾರಾಂಶ
ಕನ್ನಡಪ್ರಭ ವಾರ್ತೆ ಭದ್ರಾವತಿ
ಕೆಪಿಟಿಸಿಎಲ್ ನೌಕರರ ಸಂಘದ ತಾಲೂಕು ಅಧ್ಯಕ್ಷ, ಮಾರ್ಗದಾಳು ಕರ್ತವ್ಯ ನಿರ್ವಹಿಸುತ್ತಿರುವ ಆನಂದ್‌ರನ್ನು ನೌಕರರ ಹಿತದೃಷ್ಟಿಯಿಂದ ದೂರದ ಸ್ಥಳಕ್ಕೆ ವರ್ಗಾವಣೆ ಮಾಡದೆ ಸ್ಥಳೀಯ ವ್ಯಾಪ್ತಿಯಲ್ಲಿಯೇ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸುವಂತೆ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಸ್ಥಳೀಯ ಮಹಿಳೆಯರು ಗುರುವಾರ ಪ್ರತಿಭಟನೆ ನಡೆಸಿ ಆಗ್ರಹಿಸಿದರು.ನಗರದ ಜೆಪಿಎಸ್ ಕಾಲೋನಿ ಮೆಸ್ಕಾಂ ವಿಭಾಗೀಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಆನಂದ್‌ರವರು ಕೆಪಿಟಿಸಿಎಲ್ ನೌಕರರ ಸಂಘದ ಅಧ್ಯಕ್ಷರಾಗಿದ್ದು, ಯಾವುದೇ ರೀತಿ ಭ್ರಷ್ಟಾಚಾರ, ಕರ್ತವ್ಯಲೋಪವೆಸಗದಿದ್ದರೂ ಸಹ ರಾಜಕೀಯ ಪ್ರಭಾವಕ್ಕೆ ಮಣಿದು ದುರುದ್ದೇಶದಿಂದ ಒಂದು ವರ್ಷದ ಅವಧಿಯಲ್ಲಿ ನಿಯಮ ಉಲ್ಲಂಘಿಸಿ ೫ ಬಾರಿ ವರ್ಗಾವಣೆ ಮಾಡಿ, ಸಾಲದೆಂಬುದಕ್ಕೆ ಸುಳ್ಳು ಮೊಕದ್ದಮೆ ದಾಖಲಿಸಿ ಭಯದ ವಾತಾವರಣ ನಿರ್ಮಿಸುವ ಮೂಲಕ ನೌಕರ ವರ್ಗದ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಈ ಸಂಬಂಧ ಕೆಲವು ದಿನಗಳ ಹಿಂದೆಯೇ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ನೇತೃತ್ವದಲ್ಲಿ ಕಚೇರಿ ಮುಂಭಾಗ ಹೋರಾಟ ನಡೆಸಿ ಮನವಿ ಸಲ್ಲಿಸಲಾಗಿದೆ. ಆದರೆ ಅಧಿಕಾರಿಗಳು ಮನವಿಗೆ ಸ್ಪಂದಿಸದೆ ನಿರ್ಲಕ್ಷ್ಯತನದಿಂದ ವರ್ತಿಸುತ್ತಿದ್ದಾರೆಂದು ಆರೋಪಿಸಿದರು.
ತಕ್ಷಣ ಅಮಾನತ್ತು ಆದೇಶ ಹಿಂದಕ್ಕೆ ಪಡೆದು ಸ್ಥಳೀಯ ವ್ಯಾಪ್ತಿಯಲ್ಲಿಯೇ ಆನಂದ್‌ರವರನ್ನು ಮುಂದುವರೆಸುವಂತೆ ಒತ್ತಾಯಿಸಿದರು, ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಹೋರಾಟಕ್ಕೆ ಸ್ಪಂದಿಸಿದ ಅಧಿಕಾರಿಗಳು ಕಾಲಾವಕಾಶದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು, ಈ ಹಿನ್ನೆಲೆ ಹೋರಾಟ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಕರುಣಾಮೂರ್ತಿ, ಮುಖಂಡರಾದ ಟಿ. ಚಂದ್ರೇಗೌಡ, ಜಯರಾಮ್, ಎಂ.ಎ ಅಜಿತ್, ನಂಜುಂಡೆಗೌಡ, ಗೊಂದಿ ಜಯರಾಂ, ಮಧುಸೂದನ್, ಎಸ್.ಕೆ ಉಮೇಶ್, ಗುಣಶೇಖರ್, ಉದಯ್‌ಕುಮಾರ್, ಎಂ. ರಾಜು, ಎ.ಟಿ ರವಿ ಸೇರಿ ಸ್ಥಳೀಯ ಮಹಿಳೆಯರು, ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.